ರಾಷ್ಟ್ರದ ಪ್ರಥಮ ಐಎಎಸ್ ಅಧಿಕಾರಿ ಕಿರಣ್ ಬೇಡಿ ಅವರ ಸ್ವಯಂ ನಿವೃತ್ತಿ ಕೋರಿಕೆ ಅರ್ಜಿಗೆ ಒಂದೂವರೆ ತಿಂಗಳ ಕಾಲ ತಿಣುಕಾಡಿದ ಸರ್ಕಾರ ಅಂತಿಮವಾಗಿ ಒಪ್ಪಿಗೆ ಸೂಚಿಸಿದೆ.
ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ದಳದ ಪ್ರಧಾನ ನಿರ್ದೇಶಕರ ಹುದ್ದೆಯನ್ನು ಹೊಂದಿದ್ದ ಬೇಡಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ಸರ್ಕಾರ ಸೋಮವಾರ ನಿರ್ಧರಿಸಿತು. ದೆಹಲಿಯ ಪೊಲೀಸ್ ಆಯುಕ್ತರ ಹುದ್ದೆಯಿಂದ ವಂಚಿತರಾದ ಬಳಿಕ ಅಸಮಾಧಾನಗೊಂಡಿದ್ದ ಬೇಡಿ ಅವರು ನ.15ರಂದು ಸ್ವಯಂ ನಿವೃತ್ತಿ ಅರ್ಜಿಯನ್ನು ಸಲ್ಲಿಸಿ ಶೈಕ್ಷಣಿಕ ಮತ್ತು ಸಾಮಾಜಿಕ ಹಿತಾಸಕ್ತಿ ದೃಷ್ಟಿಯಿಂದ ಹುದ್ದೆಯನ್ನು ತ್ಯಜಿಸಲು ಇಷ್ಟಪಡುವುದಾಗಿ ತಿಳಿಸಿದ್ದರು.
ಕಳೆದ ವಾರ ರಾಷ್ಟ್ರೀಯ ಪೊಲೀಸ್ ಯೋಜನೆಗೆ ಬೇಡಿಯ ಸೇವೆಯನ್ನು ಪಡೆಯಲು ಬಯಸಿರುವುದಾಗಿ ಸರ್ಕಾರ ಕಳೆದವಾರ ಇಂಗಿತ ವ್ಯಕ್ತಪಡಿಸಿದ್ದರೂ ತಾನು ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ ಎಂದು ಬೇಡಿ ಹೇಳಿದ್ದರು.
ಅಮೃತಸರದಲ್ಲಿ ಜನಿಸಿದ ಬೇಡಿ ತಮ್ಮ ವೃತ್ತಿಜೀವನದಲ್ಲಿ ಖ್ಯಾತಿ ಗಳಿಸಿದ್ದರು. ಸಂಚಾರದ ಉಲ್ಲಂಘನೆಗೆ ದೆಹಲಿಯಲ್ಲಿ ದೃಢಕ್ರಮಗಳನ್ನು ಕೈಗೊಂಡ ಅವರು ಕ್ರೇನ್ ಬೇಡಿ ಎಂದೇ ಹೆಸರಾಗಿದ್ದರು.
ತಿಹಾರ್ ಜೈಲಿನ ಮುಖ್ಯಸ್ಥರಾಗಿ ಜೈಲಿನಲ್ಲಿ ಅನೇಕ ಸುಧಾರಣೆಗಳನ್ನು ತರುವ ಮೂಲಕ ಪ್ರಶಸ್ತಿಗೆ ಪಾತ್ರರಾದರು. ತಮಗಿಂತ 2 ವರ್ಷಗಳು ಕಿರಿಯರಾದ ದಡವಾಲ್ ಅವರನ್ನು ದೆಹಲಿ ಪೊಲೀಸ್ ಆಯುಕ್ತರಾಗಿ ನೇಮಿಸಿದ್ದರಿಂದ ತಮ್ಮನ್ನು ಕಡೆಗಣಿಸಲಾಯಿತೆಂದು ಬೇಡಿ ಆರೋಪಿಸಿದ್ದರು.
|