ಸಂಸತ್ ಭವನದ ಮೇಲೆ ದಾಳಿಗೆ ಸಂಬಂಧಪಟ್ಟಂತೆ 10 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿರುವ ಶೌಕತ್ ಹುಸೇನ್ ಗುರು ತನ್ನ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 4ರಂದು ಕೈಗೆತ್ತಿಕೊಳ್ಳಲಿದೆ.
153 ಎ ಐಪಿಸಿ ಅಡಿಯಲ್ಲಿ ತನಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಶೌಕತ್ ಗುರು ಸಲ್ಲಿಸಿದ ಅರ್ಜಿಗೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಪಿ.ಪಿ. ನೌಲೆಕರ್ ನೇತೃತ್ವದ ಪೀಠವು ಸಿಬಿಐ ಮತ್ತು ದೆಹಲಿ ಸರ್ಕಾರಕ್ಕೆ ನೋಟೀಸ್ ಕಳಿಸಿತ್ತು. 153 ಎ ಸೆಕ್ಷನ್ ಅಡಿಯಲ್ಲಿ ತನ್ನ ವಿರುದ್ಧ ದೋಷಾರೋಪವನ್ನು ಹೊರಿಸಿಲ್ಲ ಮತ್ತು ತನಗೆ ಪ್ರತಿವಾದ ಮಂಡಿಸಲು ಅವಕಾಶವನ್ನೇ ನೀಡಿಲ್ಲ ಎಂದು ಶೌಕತ್ ಗುರು ತಿಳಿಸಿದ್ದಾನೆ.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಶಾಂತಿ ಭೂಷಣ್, ಆರೋಪಿಗೆ ಸಮರ್ಥಿಸಿಕೊಳ್ಳಲು ಅವಕಾಶ ನೀಡದೇ ಅವನ ಸ್ವಾತಂತ್ರ್ಯವನ್ನು ಕಸಿಯುವಂತಿಲ್ಲ ಎಂದು ಹೇಳಿದರು. ಶೌಕತ್ ಗುರುಗೆ ವಿಚಾರಣೆ ನ್ಯಾಯಾಲಯವುಪ ಮೊಹಮ್ಮದ್ ಅಫಜಲ್ ಜತೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು.
ಆದರೆ ಶೌಕತ್ ಗುರು ಒಳಸಂಚಿನಲ್ಲಿ ಭಾಗಿಯಾಗಿಲ್ಲ ಎಂಬ ಕಾರಣದ ಮೇಲೆ ಅವನ ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳ ಜೈಲುವಾಸಕ್ಕೆ ಸುಪ್ರೀಂಕೋರ್ಟ್ ತಗ್ಗಿಸಿತು. ಅಫ್ಜಲ್ ಗುರು ಕ್ಷಮಾದಾನದ ಅರ್ಜಿಯು ಇನ್ನೂ ರಾಷ್ಟ್ರಪತಿಯ ಅಂಗಳದಲ್ಲಿ ಬಾಕಿವುಳಿದಿದೆ.
|