ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರ ಹತ್ಯೆಯು ಭಯೋತ್ಪಾದನೆ ಎಂತಹ ಅನಾಹುತ ಮಾಡುತ್ತದೆಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಶುಕ್ರವಾರ ತಿಳಿಸಿದ್ದು, ಭಯೋತ್ಪಾದನೆ ಪಿಡುಗಿನ ವಿರುದ್ಧ ಜಂಟಿ ಹೋರಾಟ ನಡೆಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಭುಟ್ಟೊ ಅವರ ದಾರುಣ ನಿಧನದಿಂದ ಮಾರಕ ಪೆಟ್ಟು ಬಿದ್ದಿದ್ದು, ಪ್ರದೇಶದ ಶಾಂತಿ, ಸಮೃದ್ಧಿ ಮತ್ತು ಒಳಿತಿನ ಮೇಲೆ ಭಯೋತ್ಪಾದನೆ ಕೆಡುಕು ಉಂಟುಮಾಡುತ್ತದೆ ಎಂದು ಸಿಂಗ್ ಹೇಳಿದ್ದಾರೆ. ವಿಶ್ವಾದ್ಯಂತ ಜೀವಿಸುವ ಎಲ್ಲ ನಾಗರಿಕರಿಗೆ ಬೆದರಿಕೆಯೊಡ್ಡಿರುವ ಈ ಪಿಡುಗನ್ನು ನಿಭಾಯಿಸಲು ಒಂದಾಗಿ ಕೆಲಸಮಾಡುವ ಕರ್ತವ್ಯ ನಮ್ಮದಾಗಿದೆ ಎಂದು ಅವರು ನುಡಿದರು.
ಉಭಯ ರಾಷ್ಟ್ರಗಳ ನಡುವೆ ಬಾಂದವ್ಯ ಸುಧಾರಣೆ ಮತ್ತು ದಕ್ಷಿಣ ಏಷ್ಯಾವನ್ನು ಸಂಪದ್ಭರಿತ ಪ್ರದೇಶವನ್ನಾಗಿ ಮಾಡಬೇಕೆಂಬ ಆಶಯವನ್ನು ಒಂದಕ್ಕಿಂತ ಹೆಚ್ಚು ಬಾರಿ ಅವರು ವ್ಯಕ್ತಪಡಿಸಿದ್ದರೆಂದು ಸಿಂಗ್ ಹೇಳಿದ್ದಾರೆ. ಭುಟ್ಟೊ ಸಾಮಾನ್ಯ ರಾಜಕೀಯ ನಾಯಕಿಯಲ್ಲ. ಅವರ ಕಾಲಾವಧಿಯಲ್ಲಿ ಅಚ್ಚಳಿಯದ ಆಳವಾದ ಪ್ರಭಾವ ಬೀರಿದ ರಾಜಕಾರಣಿ ಎಂದು ಸಿಂಗ್ ಅವರನ್ನು ಶ್ಲಾಘಿಸಿದ್ದಾರೆ.
ಪ್ರತಿಭಾ ಪಾಟೀಲ್ ಆಘಾತ
ಭುಟ್ಟೊ ನಿಧನಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಭುಟ್ಟೊ ಅವರ ಹತ್ಯೆಯಿಂದ ಪಾಕಿಸ್ತಾನಕ್ಕೆ ಮಾತ್ರವಲ್ಲ ಇಡೀ ಪ್ರದೇಶಕ್ಕೆ ತಟ್ಟಿದ ದುರಂತವಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಇಂತಹ ದುಃಖದ ಗಳಿಗೆಯಲ್ಲಿ ಭಾರತೀಯರು ನೆರೆಯ ರಾಷ್ಟ್ರದ ಜನರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಅವರು ನುಡಿದರು.
ಪ್ರಣವ್ ಮುಖರ್ಜಿ ಶೋಕ
ಭುಟ್ಟೊ ಅವರನ್ನು ಉಪಖಂಡದ ದಿಟ್ಟ, ಮಹಾನ್ ನಾಯಕಿ ಎಂದು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಬಣ್ಣಿಸಿದ್ದಾರೆ. ಮಾರಕ ಭಯೋತ್ಪಾದನೆ ದಾಳಿಗೆ ಅವರು ಬಲಿಯಾಗಿದ್ದು ದುರಂತ ಎಂದು ಅರು ನುಡಿದರು. ಭಯೋತ್ಪಾದನೆ ಪಿಡುಗಿನ ಹೋರಾಟಕ್ಕೆ ನಮ್ಮ ಸಂಕಲ್ಪವನ್ನು ಇದು ಗಟ್ಟಿಗೊಳಿಸುತ್ತದೆ ಎಂದು ಕೊಲ್ಕತಾದ ಭೇಟಿಯನ್ನು ಮೊಟಕುಗೊಳಿಸಿ ದೆಹಲಿಗೆ ಹಿಂತಿರುಗಿದ ಅವರು ಹೇಳಿದರು.
|