ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮಹತ್ವಪೂರ್ಣ ವಿಜಯ ಸಾಧಿಸಿದ ಮುಖ್ಯಮಂತ್ರಿ ನರೇಂದ್ರಿ ಮೋದಿ ಅವರಿಗೆ ಇಲ್ಲಿನ ಇಂದಿರಾಗಾಂಧಿ ವಿಮಾನನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಶನಿವಾರ ಬೆಳಿಗ್ಗೆ ಭವ್ಯ ಸ್ವಾಗತ ನೀಡಿದರು. ಮೋದಿ ಆಗಮಿಸುತ್ತಿದ್ದಂತೆ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಮಾಲಾರ್ಪಣೆ ಮಾಡಿ, ತಮಟೆಗಳನ್ನು ಬಾರಿಸುವ ಮೂಲಕ ಅಭಿನಂದಿಸಿದರು.
ಕಾರ್ಯಕರ್ತರು ಮತ್ತು ಬೆಂಬಲಿಗರು ಮೋದಿ ಅವರನ್ನು ಅಭಿನಂದಿಸಲು ಪರಸ್ಪರ ತಳ್ಳಾಟ ನಡೆಸಿದ್ದರಿಂದ ಪೊಲೀಸರಿಗೆ ನಿಯಂತ್ರಿಸುವುದು ಕಷ್ಟವಾಯಿತು. ಗುಜರಾತಿನಲ್ಲಿ ಮತ್ತು ಹಿಮಾಚಲಪ್ರದೇಶದಲ್ಲಿ ಪಕ್ಷದ ಗೆಲುವು ದೆಹಲಿ ಚುನಾವಣೆ ಮೇಲೆ ಖಚಿತ ಪರಿಣಾಮ ಉಂಟುಮಾಡುತ್ತದೆ ಎಂದು ದೆಹಲಿಯ ಬಿಜೆಪಿ ಘಟಕದ ಅಧ್ಯಕ್ಷ ಹರ್ಷ ವರ್ಧನ್ ತಿಳಿಸಿದರು.
ಎಂಸಿಡಿ ಚುನಾವಣೆಯಲ್ಲಿ ದೆಹಲಿಯ ಜನತೆ ಈಗಾಗಲೇ ಕಾಂಗ್ರೆಸ್‌ಗೆ ಬಾಗಿಲು ತೋರಿಸಿದ್ದು, ಪಕ್ಷದ ಕಾರ್ಯಕರ್ತರ ಸ್ಥೈರ್ಯ ಹೆಚ್ಚಿಸಿದೆ. ಇದರಿಂದಾಗಿ ಕಾಂಗ್ರೆಸ್ ಸ್ಥೈರ್ಯ ಕುಸಿದಿದೆ ಎಂದು ಅವರು ನುಡಿದರು.ಜನಸಾಮಾನ್ಯರ ಅಭಿವೃದ್ಧಿಗೆ ದೀಕ್ಷಿತ್ ಸರ್ಕಾರ ಸಹಾನುಭೂತಿ ತೋರಿಸುತ್ತಿಲ್ಲ ಮತ್ತು ಮುಖ್ಯಮಂತ್ರಿ ವಿದ್ಯುತ್ ಕಂಪೆನಿಗಳ ಪರವಾಗಿದ್ದು, ಜನರಿಗಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ.
9 ವರ್ಷಗಳ ಕಾಲ ಸರ್ಕಾರ ಆಳಿದ ಮುಖ್ಯಮಂತ್ರಿಗಳು ಈಗ ಕೊಳೆಗೇರಿ ನಿವಾಸಿಗಳಿಗೆ 9 ಲಕ್ಷ ಮನೆಗಳನ್ನು ನೀಡುವ ಭರವಸೆ ನೀಡಿದ್ದಾರೆಂದು ತಿಳಿಸಿದರು. 9 ವರ್ಷಗಳ ಆಡಳಿತದಲ್ಲಿ ಒಂದಾದರೂ ಮನೆಯನ್ನು ಅವರು ನಿರ್ಮಿಸಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಇಂದು ಚಂದ್ರ ಮತ್ತು ನಕ್ಷತ್ರಗಳ ಭರವಸೆಯನ್ನು ಬಡವರಿಗೆ ನೀಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
|