ಬುಡಕಟ್ಟು ಪ್ರಾಬಲ್ಯದ ಕಂದಮಾಲ್ ಜಿಲ್ಲೆಯಲ್ಲಿ ಶನಿವಾರ ಇನ್ನೊಂದು ದೇಹ ಪತ್ತೆಯಾಗಿದ್ದು, ಕೋಮು ಹಿಂಸಾಚಾರದಿಂದ ಸತ್ತವರ ಸಂಖ್ಯೆಯು ಅಧಿಕೃತವಾಗಿ 3ಕ್ಕೆ ತಲುಪಿದೆ. ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬ ಕಂದಾಯ ಇನ್ಸ್‌ಪೆಕ್ಟರನ್ನು ಅಮಾನತಿನಲ್ಲಿರಿಸಿದೆ. ಬಾರಾಕಾಮಾ ಗ್ರಾಮದಲ್ಲಿ 65 ವರ್ಷ ವಯಸ್ಸಿನ ವ್ಯಕ್ತಿಯ ದೇಹ ಪತ್ತೆಯಾಗಿರುವುದಾಗಿ ದಕ್ಷಿಣ ವಿಭಾಗದ ಕಂದಾಯ ವಿಭಾಗದ ಆಯುಕ್ತ ಸತ್ಯವ್ರತ ಸಾಹು ಅವರು ತಿಳಿಸಿದ್ದಾರೆ.
ಎರಡು ಸಮುದಾಯಗಳ ನಡುವೆ ಘರ್ಷಣೆಯಲ್ಲಿ ಈ ವ್ಯಕ್ತಿ ಮೃತಪಟ್ಟಿರುವುದಾಗಿ ಸಾಹು ತಿಳಿಸಿದ್ದಾರೆ. ಬ್ರಹಮನಿಗಾಂವ್ ಗ್ರಾಮದಲ್ಲಿ ಪೊಲೀಸ್ ಗೋಳಿಬಾರಿನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರೆ, ಬಾರಾಕಾಮಾ ಜಿಲ್ಲೆಯಲ್ಲಿ ಕಲ್ಲುತೂರಾಟದ ಘಟನೆಗಳಲ್ಲಿ ಇಬ್ಬರು ಸತ್ತಿದ್ದಾರೆಂದು ಮೂಲಗಳು ಹೇಳಿವೆ.ಬಾಲಿಗುಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳಿಗೆ ಅಗ್ನಿಸ್ಪರ್ಷ ಮಾಡಿದ ಘಟನೆಗಳು ವರದಿಯಾಗಿದ್ದು, ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
ಕರ್ತವ್ಯ ನಿರ್ಲಕ್ಷ್ಯತೆಯ ಆರೋಪದ ಮೇಲೆ ಟಿಕಾಬಾಲಿ ಮತ್ತು ಫಿರಿಂಗಿಯ ಸರ್ಕಲ್ ಇನ್ಸ್‌ಪೆಕ್ಟರ್ ಅವರನ್ನು ಅಮಾನತಿನಲ್ಲಿ ಇರಿಸಲಾಗಿದೆ. ಎರಡೂ ಪೊಲೀಸ್ ಠಾಣೆಗಳಿಗೆ ದುಷ್ಕರ್ಮಿಗಳು ಅಗ್ನಿಸ್ಪರ್ಶ ಮಾಡಿ ಸರ್ಕಾರಿ ವಾಹನಗಳನ್ನು ಸುಟ್ಟು ಹಾಕಿದ್ದರು.
ಗಲಭೆಕೋರರು ಕಂದಾಯ ಕಚೇರಿಗೆ ಕೂಡ ಬೆಂಕಿ ಹಚ್ಚಿ ಅಮೂಲ್ಯ ದಾಖಲೆಗಳನ್ನು ಸುಟ್ಟಿದ್ದರಿಂದ ಕಂದಾಯ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ.
|