ಹಿಮಾಲಯ ಪರ್ವತ ಕಣಿವೆಗಳ ಪುಟ್ಟ ರಾಜ್ಯ ಹಿಮಾಚಲ್ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್, ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.
ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ, ವಿಧಾನಸಭೆಯ ಒಟ್ಟು 68 ಸ್ಥಾನಗಳಲ್ಲಿ 41 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಂಡು ಅಧಿಕಾರ ಚಲಾಯಿಸುವ ಹಕ್ಕನ್ನು ಪಡೆದುಕೊಂಡಿದೆ.
ಪ್ರೇಮ್ ಕುಮಾರ್ ಧುಮಾಲ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, 63 ವರ್ಷದ ಧುಮಾಲ್, ಎರಡನೇ ಬಾರಿಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ.
ಹಿಮಾಚಲ್ ಪ್ರದೇಶ ರಾಜ್ಯಪಾಲರಾದ ವಿ.ಎಸ್.ಕೊಕ್ಜೆ ಅವರು ಧುಮಾಲ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ರಾಜ್ಯದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಧುಮಾಲ್ ಜೊತೆ, ಬಿಜೆಪಿ ಹಿರಿಯ ಶಾಸಕರು ಸಹ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ.
ಈ ಪ್ರಮಾಣ ವಚನ ಸಮಾರಂಭವನ್ನು ವೀಕ್ಷಿಸಲು ಕೇಂದ್ರದಿಂದ ಹಿರಿಯ ನಾಯಕರುಗಳಾದ ಎಲ್.ಕೆ.ಆಡ್ವಾನಿ, ಅರುಣ್ ಜೆಟ್ಲಿ, ಉತ್ತರಾಂಚಲ್, ರಾಜಸ್ಥಾನ, ಛತ್ತಿಸ್‌ಗಡ್ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆಂದು ಹಿಮಾಚಲ್ ಪ್ರದೇಶ ಬಿಜೆಪಿ ಘಟಕ ತಿಳಿಸಿದೆ.
|