ತನ್ನ ಕಾರ್ಯಾಚರಣೆಗೆ ರಾಜ್ಯದಲ್ಲಿ ನೆಲೆ ಸ್ಥಾಪಿಸಲು ಎಲ್‌ಟಿಟಿಇ ಯೋಜಿಸುತ್ತಿರುವುದರಿಂದ ತಮಿಳುನಾಡಿನಲ್ಲಿ ಭದ್ರತಾ ಪರಿಸ್ಥಿತಿ ಅಪಾಯಕಾರಿಯಾಗಿ ವರಿವರ್ತನೆಯಾಗುತ್ತಿದೆ ಎಂದು ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಸೋಮವಾರ ತಿಳಿಸಿದರು. ಶ್ರೀಲಂಕಾದಲ್ಲಿ ಎಲ್‌ಟಿಟಿಇಗೆ ತೀವ್ರ ಮಿಲಿಟರಿ ಹಿನ್ನಡೆ ಉಂಟಾಗಿರುವುದರಿಂದ ಅದು ತನ್ನ ಕಾರ್ಯಾಚರಣೆಗೆ ತಮಿಳುನಾಡಿನಲ್ಲಿ ನೆಲೆ ಸ್ಥಾಪಿಸಲು ಯೋಜಿಸುತ್ತಿದೆ ಎಂದು ಅವರು ನುಡಿದರು.
ರಾಜ್ಯದಲ್ಲಿ ಅಪಾಯಕಾರಿ ಪರಿಸ್ಥಿತಿ ನೆಲೆಸಿದ್ದು. ನಿಷೇಧಿತ ಸಂಘಟನೆಗೆ ಎಐಎಡಿಎಂಕೆ ಹೊರತುಪಡಿಸಿ ಮಿಕ್ಕೆಲ್ಲ ರಾಜಕೀಯ ಪಕ್ಷಗಳು ಕೆಂಪು ಹಾಸಿನ ಸ್ವಾಗತ ನೀಡಲು ಸಿದ್ಧವಾಗಿದೆ ಎಂದು ಪಕ್ಷದ ಮುಖ್ಯಕಚೇರಿಯಲ್ಲಿ ವರದಿಗಾರರಿಗೆ ತಿಳಿಸಿದರು. ರಾಜ್ಯ ಸರ್ಕಾರಕ್ಕೆ ಕೇಂದ್ರದ ಬೆಂಬಲವಿರುವ ಹಿನ್ನೆಲೆಯಲ್ಲಿ ದೇವರೇ ತಮಿಳುನಾಡನ್ನು ಉಳಿಸಬೇಕು ಎಂದು ಅವರು ನುಡಿದರು.
ಶ್ರೀಲಂಕಾ ಮಿಲಿಟರಿಯ ದಾಳಿಯಿಂದ ಅಲ್ಲಿ ದುರ್ಬಲವಾಗಿರುವ ಎಲ್‌ಟಿಟಿಇ, ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ ಸರಿಯಿಲ್ಲದಿರುವುದರಿಂದ ಅಲ್ಲಿ ನೆಲೆ ಸ್ಥಾಪಿಸಲು ಹುಡುಕುತ್ತಿದೆ ಎಂದು ಅವರು ನುಡಿದರು.ಎಲ್‌ಟಿಟಿಇಗೆ ಸಾಮಗ್ರಿಗಳು ಮತ್ತು ವಸ್ತುಗಳ ಕಳ್ಳಸಾಗಣೆ ದಿನನಿತ್ಯದ ವ್ಯವಹಾರವಾಗಿದೆ ಎಂದು ಅವರು ಆರೋಪಿಸಿದರು.
|