ಪ್ರಖ್ಯಾತ ಶಬರಿಮಲೆ ದೇವಸ್ಥಾನದ ಭಕ್ತರು ಎದುರಿಸುವ ಸಮಸ್ಯೆಗಳನ್ನು ಸ್ವತಃ ಅರಿಯಲು ಅರಣ್ಯಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ದೇವಸ್ಥಾನಕ್ಕೆ ಭೇಟಿ ನೀಡಿದ 84 ವರ್ಷ ವಯಸ್ಸಿನ ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಪ್ರಥಮ ಮಾರ್ಕ್ಸ್‌ವಾದಿ ನಾಯಕರೆನಿಸಿದ್ದಾರೆ. ಕಾಮ್ರೇಡ್ ವಿಎಸ್ ಎಂದೇ ಜನಪ್ರಿಯರಾದ ವೇಲಿಕಾಟ್ಟು ಶಂಕರನ್ ಅಚ್ಯುತಾನಂದನ್ ಸಾವಿರಾರು ಭಕ್ತರ ಜತೆ 8 ಕಿಮೀ ಪಾದಯಾತ್ರೆ ಮುಗಿಸಿ ಭಾನುವಾರ ರಾತ್ರಿ ಬೆಟ್ಟದ ತುದಿಗೆ ತಲುಪಿ ಅಯ್ಯಪ್ಪನ ದರ್ಶನ ಪಡೆದರು.
ಮುಖ್ಯಮಂತ್ರಿ 3 ಗಂಟೆಗಳ ಕಾಲದ ಪಾದಯಾತ್ರೆ ಬಳಿಕ ಯಾವುದೇ ಆಯಾಸದ ಲಕ್ಷಣ ತೋರಿಸಲಿಲ್ಲ. ನಿಯಮಿತವಾಗಿ ಯೋಗಾಭ್ಯಾಸ ಮಾಡುವ ಮುಖ್ಯಮಂತ್ರಿ ಇಂದು ದೇವಸ್ಥಾನ ಅಧಿಕಾರಿಗಳನ್ನು ಭೇಟಿ ಮಾಡಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿರುವ ಯಾತ್ರಿಗಳ ಸೌಲಭ್ಯಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿದರು.
ಶಬರಿಮಲೈ ಯಾತ್ರೆಗೆ ತೆರಳುವ ಮುನ್ನ 48 ದಿನಗಳ ಕಠಿಣ ವ್ರತ ಆಚರಿಸುವ ಭಕ್ತರು ತಮ್ಮ ತಲೆಯ ಮೇಲೆ ಇರುಮುಡಿಯನ್ನು ಒಯ್ಯುತ್ತಾರೆ. ಕ್ರಿಸ್ತಪೂರ್ವ 1200 ವರ್ಷಗಳಷ್ಟು ಪ್ರಾಚೀನವಾದ್ದೆಂದು ಹೇಳಲಾದ ಈ ದೇವಳವು ಜಾತ್ಯತೀತ ಸ್ವರೂಪವನ್ನು ಹೊಂದಿದ್ದು, ಅಯ್ಯಪ್ಪನ ಮುಸ್ಲಿಂ ಸಹಚರನೆಂದು ಹೇಳಲಾದ ವಾವಾರ್ ಮಸೀದಿಯಲ್ಲಿ ಭಕ್ತರು ಮೊದಲಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಈ ದೇವಳವು ಎಲ್ಲ ಧರ್ಮಗಳ ಜನರಿಗೆ ಮುಕ್ತವಾಗಿದ್ದರೂ 10ರಿಂದ 50ರ ವಯೋಮಿತಿಯ ಸ್ತ್ರೀಯರ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ.
|