ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಕೇಂದ್ರೀಯ ಮೀಸಲು ಪಡೆ ಶಿಬಿರದ ಮೇಲೆ ಮಂಗಳವಾರ ನಸುಕಿನಲ್ಲಿ ಉಗ್ರಗಾಮಿ ಸಂಘಟನೆ ಲಷ್ಕರ್-ಇ-ತೋಯ್ಬಾ ದಾಳಿ ನಡೆಸಿದ್ದು, ಏಳು ಭದ್ರತಾ ಸಿಬ್ಬಂದಿಗಳು ಸೇರಿದಂತೆ, ಕನಿಷ್ಠ ಎಂಟು ಮಂದಿ ಹತರಾಗಿದ್ದು ಇತರ ಐದು ಮಂದಿ ಗಾಯಗೊಂಡಿದ್ದಾರೆ.
ದಾಳಿಯ ಹಿಂದೆ ಲಷ್ಕರೆ ಕೈವಾಡ ಇರುವುದನ್ನು ರಾಜಧಾನಿಯ ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಸಾವನ್ನಪ್ಪಿರುವ ಏಳು ಭದ್ರತಾ ಸಿಬ್ಬಂದಿಗಳಲ್ಲಿ ಐದು ಮಂದಿ ಮೀಸಲು ಪಡೆಯ ಸಿಬ್ಬಂದಿಗಳಾಗಿದ್ದರೆ, ಇನ್ನಿಬ್ಬರು ಉತ್ತರ ಪ್ರದೇಶ ಪೊಲೀಸರು.
ಶಿಬಿರದ ಪ್ರವೇಶ ದ್ವಾರದ ಬಳಿ ಮೊದಲು ಗುಂಡುಹಾರಿಸಿದ ಉಗ್ರರು ಬಳಿಕ ಕಂಟ್ರೋಲ್ ರೂಂಗೆ ಪ್ರವೇಶ ಮಾಡಿದ್ದು, ಅವರು ಇನ್ನೂ ಅಲ್ಲೇ ಇದ್ದಾರೆಂದು ಹೇಳಲಾಗಿದ್ದು, ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಒಂದು ತಿಂಗಳ ಹಿಂದಷ್ಟೆ, ನ.23ರಂದು ಉಗ್ರರು ಉತ್ತರ ಪ್ರದೇಶದ ಲಕ್ನೋ, ಫೈಜಾಬಾದ್ ಮತ್ತು ವಾರಣಾಸಿಗಳ ನ್ಯಾಯಾಲಯ ಸಂಕೀರ್ಣದಲ್ಲಿ ಏಕಕಾಲಕ್ಕೆ ಬಾಂಬ್ ದಾಳಿ ನಡೆಸಿದ್ದು, 13 ಮಂದಿ ಸಾವನ್ನಪ್ಪಿದ್ದರು.
ಹೊಸವರ್ಷದ ಆರಂಭದ ದಿನದಲ್ಲೇ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಸಂಭ್ರಮದ ಜಾಗದಲ್ಲಿ ಕರಾಳ ಛಾಯೆ ಮೂಡಿಸಿದ್ದಾರೆ.
|