ನಾಗಾಲ್ಯಾಂಡ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆಯ ಬಗ್ಗೆ ಊಹಾಪೋಹಗಳು ಎದ್ದಿರುವ ನಡುವೆ, ರಾಷ್ಟ್ರಪತಿ ಆಳ್ವಿಕೆಯ ಕ್ರಮವು ಅಕ್ರಮ ಮತ್ತು ಅಸಂವಿಧಾನಿಕವಲ್ಲದೇ ಪ್ರಜಾಪ್ರಭುತ್ವದ ಹತ್ಯೆಯೆನಿಸುತ್ತದೆ ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫು ರಿಯೊ ತಿಳಿಸಿದ್ದಾರೆ.
"ಮುಂದಿನ ವರ್ಷ ಚುನಾವಣೆಗೆ ತೆರಳಲಿರುವ ನಾಗಾಲ್ಯಾಂಡ್‌ನ ಜನರನ್ನು ಎದುರಿಸುವುದು ಕಾಂಗ್ರೆಸ್ ಪಕ್ಷಕ್ಕೆ ಇಷ್ಟವಿಲ್ಲ. ಚುನಾವಣೆಗೆ ಅಡ್ಡಿಪಡಿಸಲು ಕಾಂಗ್ರೆಸ್ ಬಯಸುತ್ತಿದೆ. ಅದು ನಿಜವಾಗಲೂ ರಾಷ್ಟ್ರಪತಿ ಆಳ್ವಿಕೆ ಹೇರಿದರೆ ಪ್ರಜಾಪ್ರಭುತ್ವದ ಹತ್ಯೆಯಲ್ಲದೇ ಬೇರೇನೂ ಅಲ್ಲ" ಎಂದು ರಿಯೊ ಹೇಳಿದರು. ಪೂರ್ಣ ಸ್ವರೂಪದ ಕೇಂದ್ರ ಸಂಪುಟವು ಮಂಗಳವಾರ ಭೇಟಿಯಾಗದಿದ್ದರೂ, ಕಾಂಗ್ರೆಸ್ ಸಂಪುಟ ದರ್ಜೆ ಸಚಿವರ ನಡುವೆ ಈ ವಿಷಯ ಕುರಿತು ಸಮಾಲೋಚನೆ ನಡೆದಿದೆ ಎಂದು ಹೇಳಿದ ಅವರು, ಕಾಂಗ್ರೆಸ್ಸೇತರ ಪಕ್ಷಗಳು ಭಾಗವಹಿಸಿರಲಿಲ್ಲ ಎಂದು ರಿಯೊ ಕೊಹಿಮಾದಿಂದ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಯುಪಿಎ ಪ್ರಮುಖ ಅಂಗಪಕ್ಷ ಡಿಎಂಕೆ ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯನ್ನು ವಿರೋಧಿಸಿದೆ. ನಾಲ್ಕು ವಾಮಪಕ್ಷಗಳಾದ ಸಿಪಿಎಂ, ಸಿಪಿಐ, ಆರ್‌ಎಸ್‌ಪಿ ಮತ್ತು ಫಾರ್ವರ್ಡ್ ಬ್ಲಾಕ್ ಪ್ರಧಾನಮಂತ್ರಿ ಮತ್ತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಇಂತಹ ಕ್ರಮವನ್ನು ವಿರೋಧಿಸಿವೆ.
|