ಒರಿಸ್ಸಾ-ಜಾರ್ಖಂಡ್ ಗಡಿಯ ಬಾನ್ಸ್‌ಜಾರ್ ಪೊಲೀಸ್ ಚೌಕಿಯಲ್ಲಿ ಶಸ್ತ್ರಸಜ್ಜಿತ ಮಾವೋವಾದಿಗಳು ಬುಧವಾರ ದಾಳಿ ಮಾಡಿ ಪೊಲೀಸ್ ಸಿಬ್ಬಂದಿಯೊಬ್ಬನನ್ನು ಹತ್ಯೆ ಮಾಡಿದ್ದಾರೆ ಮತ್ತು ಏಳುಮಂದಿಯನ್ನು ಗಾಯಗೊಳಿಸಿದ್ದಾರೆ. ಅವರಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಭಾರೀ ಶಸ್ತ್ರಸಜ್ಜಿತರಾದ 50 ಮಂದಿ ಉಗ್ರರು ಜಾರ್ಖಂಡ್‌ನ ಸಿಂಡೇಗಾ ಜಿಲ್ಲೆಯ ಚೌಕಿಯ ಮೇಲೆ ಗುಂಡು ಹಾರಿಸಿದರು ಮತ್ತು ಬಾಂಬ್‌ಗಳನ್ನು ಎಸೆದರೆಂದು ಪೊಲೀಸರು ತಿಳಿಸಿದ್ದಾರೆ.
ಬಸ್‌ವೊಂದರ ಮೇಲೆ ದಾಳಿ ಮಾಡಿ ಪ್ರಯಾಣಿಕನನ್ನು ಗಾಯಗೊಳಿಸಿದರೆಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ 8 ಗಾಯಾಳುಗಳನ್ನು ಇಸ್ಪಾತ್ ಜನರಲ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಸುನಿಲ್ ಸಹಾಯ್ ಎಂದು ಗುರುತಿಸಲಾದ ಪೊಲೀಸರೊಬ್ಬರು ಮೃತಪಟ್ಟರು. ಉಳಿದವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮತ್ತು ಆಸ್ಪತ್ರೆ ಮೂಲಗಳು ಹೇಳಿವೆ. ಚೌಕಿಯ ಮೇಲ್ವಿಚಾರಕ ಅಮರನಾಥ್ ಪಾಸ್ವಾನ್ ಕೂಡ ದಾಳಿಯಿಂದ ಗಾಯಗೊಂಡಿದ್ದಾರೆ.
ಆದಾಗ್ಯೂ, ಸುಮಾರು 500 ಮಾವೋವಾದಿಗಳು ಚೌಕಿ ಮೇಲೆ ದಾಳಿಮಾಡಿ ಪೆಟ್ರೋಲ್ ಬಾಂಬ್‌ಗಳನ್ನು ಎಸೆದು ಪೊಲೀಸ್ ಸಿಬ್ಬಂದಿಯ ಮೇಲೆ ಎಡಬಿಡದೇ ಗುಂಡುಹಾರಿಸಿದರೆಂದು ಸಾರ್ಜೆಂಟ್ ಮೇಜರ್ ಜೆ.ಕೆ.ಝಾ ತಿಳಿಸಿದ್ದಾರೆ. ಚೌಕಿಯ ಕಾವಲು ಕಾಯುತ್ತಿದ್ದ 20 ಯೋಧರು ಪ್ರತಿದಾಳಿ ನಡೆಸಿದ್ದು, ಮಾವೋವಾದಿಗಳು ಇದ್ದ ಜಾಗದಲ್ಲಿ ರಕ್ತದ ಕಲೆಗಳು ಪತ್ತೆಯಾಗಿರುವುದರಿಂದ ಅವರ ಕಡೆಯೂ ಸತ್ತಿರಬಹುದೆಂದು ಶಂಕಿಸಿದ್ದಾರೆ.
|