ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಭಾರತೀಯ ವಸ್ತ್ರ ವಿನ್ಯಾಸಕ ಆನಂದ ಜೋನ್ ಅಮೆರಿಕದ ಫ್ಯಾಷನ್ ಉದ್ದಿಮೆಯಲ್ಲಿ ಯಶಸ್ಸು ಪಡೆದಿದ್ದರಿಂದ ಅವರನ್ನು ದುಷ್ಟನ ರೀತಿಯಲ್ಲಿ ಚಿತ್ರಿಸಲಾಯಿತೆಂದು ಜೋನ್ ಸೋದರಿ ಮುಂಬೈನಲ್ಲಿ ಆರೋಪಿಸಿದ್ದಾರೆ. ಅಮೆರಿಕದ ಪೌರರು ಭೇದಿಸಲು ಅಸಾಧ್ಯವಾದ ಉದ್ದಿಮೆಯನ್ನು ಜೋನ್ ಭೇದಿಸಿದ್ದು ಇದಕ್ಕೆ ಕಾರಣ ಎಂದು ಅಮೆರಿಕ ಮೂಲದ ಸೋದರಿ ಸಂಜನ ಜೋನ್ ತಿಳಿಸಿದ್ದಾರೆ.
ಆನಂದ್ ಕಂಪೆನಿಗೆ ಧನಸಹಾಯ ಸಿಕ್ಕಿದ ಕೂಡಲೇ ಇವೆಲ್ಲ ದೂರುಗಳು ಆರಂಭವಾದವು. ಕೆಲವು ದೂರುಗಳು 5 ವರ್ಷಗಳ ಹಿಂದಿನದು. ಈ ಯುವತಿಯರು ತಕ್ಷಣವೇ ಏಕೆ ದೂರುಗಳನ್ನು ಸಲ್ಲಿಸಿಲ್ಲ ಎಂದು ಸಂಜನಾ ಒತ್ತರಿಸಿ ಬಂದ ಕಣ್ಣೀರು ಒರೆಸಿಕೊಳ್ಳುತ್ತಾ ಹೇಳಿದರು.
ಆನಂದ್ ಅವರ ಗಮನಾರ್ಹ ಯಶಸ್ಸು ಕೆಲವರ ಹುಬ್ಬೇರಿಸುವಂತೆ ಮಾಡಿ ಅದನ್ನು ಜೀರ್ಣಿಸಿಕೊಳ್ಳಲಾಗದೇ ಸುಳ್ಳುಪ್ರಕರಣಗಳಲ್ಲಿ ಅವರನ್ನು ಸಿಕ್ಕಿಹಾಕಿಸಲಾಗಿದೆಯೆಂದು ಅವರ ವಕೀಲ ಮಜೀದ್ ಮೆಮನ್ ತಿಳಿಸಿದ್ದಾರೆ. ಯಾವುದೇ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ ಮಾಡಿದ್ದಕ್ಕೆ ವೈದ್ಯಕೀಯ ಸಾಕ್ಷ್ಯಾಧಾರವಿಲ್ಲ ಎಂದು ಹೇಳಿದರು.
ಈ ದೂರುಗಳು ಅರ್ಥಹೀನ. ಏಕೆಂದರೆ ಈ ಘಟನೆ ನಡೆದಿದೆಯೆಂದು ದೂರುದಾರರು ಆರೋಪಿಸಿದ ದಿನಾಂಕದ ಬಳಿಕವೂ ಅವರು ಆನಂದ್ ಜತೆ ಸುತ್ತಿದ್ದಾರೆಂದು ಸಂಜನಾ ಹೇಳಿದ್ದಾರೆ.
|