ಕೆಳ ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯ ಲಾಕಿ ಬಜಾರ್ ಪ್ರದೇಶದಲ್ಲಿ ಅನಿರ್ದಿಷ್ಟ ಕರ್ಫ್ಯೂವನ್ನು ಗುರುವಾರ ಮುಂದುವರಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಬುಧವಾರದಿಂದ ಜಾರಿ ಮಾಡಿದ ಕರ್ಫ್ಯೂವನ್ನು ಮುಂದುವರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ತಿಳಿಸಿದರು. ಕಾನೂನು ಸುವ್ಯವಸ್ಥೆ ಪಾಲನೆಗೆ ಹೆಚ್ಚುವರಿ ಪೊಲೀಸ್ ಮತ್ತು ಅರೆಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಅಸ್ಸಾಂ ಒಪ್ಪಂದ ಅನುಷ್ಠಾನ ಸಚಿವ ಮತ್ತು ಹಿರಿಯ ಕ್ಯಾಬಿನೆಟ್ ಸದಸ್ಯ ಡಾ. ಭೂಮಿಂದರ್ ಬರ್ಮನ್ ಇಲ್ಲಿಗೆ ಭೇಟಿ ನೀಡುತ್ತಿದ್ದು, ನಿಷೇಧಾಜ್ಞೆ ಸಡಿಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಹಿಂಸಾಚಾರ ಸಂಭವಿಸಿದ ಬಳಿಕ ಸೇನೆಯು ಬುಧವಾರ ಪಥಸಂಚಲನ ನಡೆಸಿ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿತ್ತು.
ಪ್ರತಿಭಟನೆಕಾರರನ್ನು ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದ್ದರಿಂದ 7 ಮಂದಿ ಮೃತರಾಗಿದ್ದರು. ಪ್ರತಿಭಟನೆಕಾರರು ಮುಸ್ಲಿಂ ರಾಭಾಯೇತರ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ನಿಯಂತ್ರಿಸಲು ಲಾಠಿಪ್ರಹಾರ ಮತ್ತು ಗಾಳಿಯಲ್ಲಿ ಗುಂಡು ವಿಫಲವಾದ ಬಳಿಕ ಹರಿತವಾದ ಆಯುಧಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದರು.
|