ಹವಾಮಾನ ಬದಲಾವಣೆಗೆ ಕೈಗಾರಿಕೀಕರಣದ ರಾಷ್ಟ್ರಗಳು ದೊಡ್ಡ ಜವಾಬ್ದಾರಿ ಹೊರಬೇಕು ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಗುರುವಾರ ಅಭಿಪ್ರಾಯಪಟ್ಟರು. ಈ ಹಾನಿಯನ್ನು ಸರಿಪಡಿಸುವ ಹೊಣೆ ಆ ರಾಷ್ಟ್ರಗಳ ಹೆಗಲ ಮೇಲೆ ಬಿದ್ದಿದೆ ಎಂದು ಅವರು ನುಡಿದರು.
ಇಲ್ಲಿನ 95ನೇ ಭಾರತೀಯ ವಿಜ್ಞಾನ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ಅಭಿವೃದ್ಧಿಹೊಂದಿದ ಕೈಗಾರೀಕೃತ ಆರ್ಥಿಕ ರಾಷ್ಟ್ರಗಳು ಅನುಸರಿಸಿದ ಪರಿಸರ ಹಾನಿಯ ಬೆಳವಣಿಗೆಯ ಮಾರ್ಗದಲ್ಲಿ ಜಗತ್ತು ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಈಗಿನ ಪರಿಣಾಮಕ್ಕೆ ಅವರೇ ಜವಾಬ್ದಾರಿ ಹೊರಬೇಕು ಮತ್ತು ಹಾನಿ ಸರಿಪಡಿಸುವ ಹೊಣೆ ಹೊರಬೇಕು ಎಂದು ಸಿಂಗ್ ಹೇಳಿದರು.
ಹವಾಮಾನ ಬದಲಾವಣೆಯು ಅಭಿವೃದ್ಧಿ ಅವಕಾಶಗಳಿಗೆ ಮತ್ತು ಜನರ ಜೀವನೋಪಾಯದ ಮೇಲೆ ದೊಡ್ಡ ಸವಾಲನ್ನು ಒಡ್ಡಿದೆ ಎಂದು ಅವರು ನುಡಿದರು. ಪರಿಸರ ಹಾನಿಗೆ ಭಾರತವು ಕ್ರಿಯಾಶೀಲ ಮತ್ತು ಸಮಗ್ರ ನಿಲುವನ್ನು ಅಳವಡಿಸಿಕೊಂಡಿರುವುದಾಗಿ ಅವರು ನುಡಿದರು.
ವ್ಯರ್ಥ ಬಳಕೆ ಮತ್ತು ಪರಿಸರ ಹಾನಿ ಕೈಗಾರೀಕರಣದ ಪಾಶ್ಚಿಮಾತ್ಯ ಮಾದರಿಯನ್ನು ನಾವು ಅನುಸರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನುಡಿದರು.
|