ಈ ವ್ಯಕ್ತಿಯನ್ನು ಗುಜರಾತಿಗಳು ಪ್ರೀತಿಸುತ್ತಾರೆ, ವಿರೋಧ ಪಕ್ಷದವರು ದ್ವೇಷಿಸುತ್ತಾರೆ, ಆದರೆ... ಕೆಲವರು ಪೂಜಿಸುತ್ತಾರೆ! ಯಾಕೆಂದರೆ ಅವರನ್ನು ಎಂದಿಗೂ ನಿರ್ಲಕ್ಷಿಸುವಂತಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.
ಗುಜರಾತಿನಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಿರುವ ನರೇಂದ್ರ ಮೋದಿ ಅವರಿಗಾಗಿಯೇ ಅಲ್ಲೊಂದು ಮಂದಿರವೂ ಇದೆ ಎಂದರೆ ನೀವು ನಂಬಲೇಬೇಕು,
ರಾಜ್‌ಕೋಟ್ ಜಿಲ್ಲೆಯ ವೆಂಕಾನೇರ್ ಉಪಜಿಲ್ಲೆಯ ಭೋಜ್‌ಪಾರಾ ಎಂಬ ಹಳ್ಳಿಗೆ ಕಾಲಿಡುವಾಗಲೇ ದಾರಿಯಲ್ಲೊಂದು ಮಂದಿರ ಕಾಣುತ್ತದೆ. ಇದನ್ನು ಎರಡು ವರ್ಷಗಳ ಹಿಂದೆ ಕಟ್ಟಿಸಲಾಗಿತ್ತು. ಆದರೆ ಇಲ್ಲೀಗ ಮೋದಿ ಅವರ ಆಳೆತ್ತರದ ಭಾವಚಿತ್ರವಿದೆ.
ಸೌರಾಷ್ಟ್ರದ ಈ ಭಾಗದಲ್ಲಿ ಅಲೆಮಾರಿ ಜೀವನ ಸಾಗಿಸುತ್ತಿರುವ ಸುಮಾರು 110 ಹಾವಾಡಿಗ ಕುಟುಂಬಗಳು ಸೇರಿ ಈ ಮಂದಿರವನ್ನು ನಿರ್ಮಿಸಿದ್ದವು.
ಎರಡು ವರ್ಷಗಳ ಹಿಂದೆ ಟೆಂಟುಗಳಲ್ಲಿ ಜೀವಿಸುತ್ತಿದ್ದ ಅವರಿಗೆ ಮೋದಿ ಸರಕಾರವು ಜಮೀನು ನೀಡಿತ್ತು. ಈಗವರು ತಮ್ಮದೇ ಮನೆ ಕಟ್ಟಿಕೊಂಡು ಬದುಕುತ್ತಿದ್ದಾರೆ.
ಹಿಂದೆ ನಮ್ಮ ಮಕ್ಕಳು ಹಾವು, ಚೇಳು ಹಿಡಿಯುತ್ತಾ ಆಟದಲ್ಲೇ ಮಗ್ನರಾಗಿರುತ್ತಿದ್ದರು. ಈಗ ಅವರು ಶಾಲೆಗೂ ಹೋಗತೊಡಗಿದ್ದಾರೆ ಎಂದು ಗುಜರಾತಿ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ ಸಮುದಾಯದ ಮುಖ್ಯಸ್ಥರೊಬ್ಬರು.
ಮೋದಿ ಮಾಡಿದ ಸಹಾಯಕ್ಕೆ ಕೃತಜ್ಞರಾಗಿರುವ ಈ ಸಮುದಾಯದ ಮಂದಿ, ಅವರನ್ನು ದೇವರಿಗಿಂತ ಕಡಿಮೆಯಲ್ಲ ಎಂದೇ ಭಾವಿಸುತ್ತಾರೆ. ಈ ಮಂದಿರದಲ್ಲಿ ಪ್ರತಿದಿನ ಎರಡು ಬಾರಿ ಪ್ರಾರ್ಥನೆಯನ್ನೂ ನಡೆಸಲಾಗುತ್ತದೆ.
ಕಳೆದ ಚುನಾವಣೆಗಳ ಬಳಿಕ ಮತ್ತಷ್ಟು ಎತ್ತರಕ್ಕೇರಿರುವ ಮೋದಿ ಅವರ ವ್ಯಕ್ತಿತ್ವವು ಏನೆಲ್ಲಾ ಪವಾಡಗಳನ್ನು ಮಾಡುತ್ತಿದೆಯೆಂದರೆ, ಅವರ ಕಟ್ಟಾ ಅಭಿಮಾನಿಯೊಬ್ಬ ಹನುಮಾನ್ ಚಾಲೀಸಾದ ಮಾದರಿಯಲ್ಲೇ ಮೋದಿ ಚಾಲೀಸಾವನ್ನೂ ರಚಿಸಿದ್ದಾನೆ!
|