ಧರ್ಮಪುರಿ ಬಸ್ ಸುಟ್ಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮೂವರು ಎಐಎಡಿಎಂಕೆ ಕಾರ್ಯಕರ್ತರಿಗೆ ಶುಕ್ರವಾರ ತಾತ್ಕಾಲಿಕ ಉಪಶಮನ ಸಿಕ್ಕಿದೆ. ಸುಪ್ರೀಂಕೋರ್ಟ್‌ನಲ್ಲಿ ತಪ್ಪಿತಸ್ಥರು ಸಲ್ಲಿಸಿರುವ ವಿಶೇಷ ರಜಾ ಅರ್ಜಿ ವಿಲೇವಾರಿಯಾದ ನಂತರವೇ ಮರಣದಂಡನೆ ಶಿಕ್ಷೆಯನ್ನು ಜಾರಿಗೆ ತರಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಸುಪ್ರೀಂಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸುವ ತನಕ ಮರಣದಂಡನೆ ಶಿಕ್ಷೆಯನ್ನು ಜಾರಿಗೆ ತರಬಾರದೆಂದು ಕೊಯಮತ್ತೂರು ಜೈಲಿನ ಸೂಪರಿಂಟೆಂಡೆಂಟ್ ಆದೇಶ ನೀಡಿರುವುದಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜಾ ಎಳಂಗೊ ಕೋರ್ಟ್‌ಗೆ ತಿಳಿಸಿದರು.
ನ್ಯಾಯಮೂರ್ತಿ ಡಿ.ಮುರುಗೇಶನ್ ಮತ್ತು ವಿ,ಪೆರಿಯಕುಪ್ಪಯ್ಯ ಅವರಿದ್ದ ವಿಭಾಗೀಯ ಪೀಠದ ಎದುರು ತಪ್ಪಿತಸ್ಥರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಂದಾಗ,ಎಳಂಗೊ ಮೇಲಿನ ವಿಷಯ ತಿಳಿಸಿದರು. ಸುಪ್ರೀಂಕೋರ್ಟ್ ರಿಜಿಸ್ಟ್ರಾರ್‌ಗೆ ಕೂಡ ಜೈಲು ಸೂಪರಿಂಟೆಂಡೆಂಟ್ ಆದೇಶದ ಪ್ರತಿಯನ್ನು ಸಲ್ಲಿಸಿದ್ದಾರೆಂದು ಪ್ರಾಸಿಕ್ಯೂಟರ್ ತಿಳಿಸಿ ಆದೇಶದ ಫ್ಯಾಕ್ಸ್ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದರು.
ಪ್ರಾಸಿಕ್ಯೂಷನ್ ಕೋರಿಕೆಯನ್ನು ಸ್ವೀಕರಿಸಿದ ಪೀಠವು 8 ವಾರಗಳ ಅವಧಿವರೆಗೆ ಮರಣದಂಡನೆಯನ್ನು ಕಾಯ್ದಿರಿಸಬೇಕೆಂದು ಮೂವರು ಅಪರಾಧಿಗಳು ಸಲ್ಲಿಸಿದ ಅರ್ಜಿಯನ್ನು ವಿಲೇವಾರಿ ಮಾಡಿತು.
ಕೆಳ ಕೋರ್ಟ್ ಎಐಎಡಿಎಂಕೆ ಕಾರ್ಯಕರ್ತರಾದ ನೆಡುಚೆಳಿಯನ್, ರವೀಂದ್ರನ್ ಮತ್ತು ಮುನಿಯಪ್ಪನ್ ಅವರಿಗೆ ಬಸ್ ಸುಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು. ಬಸ್ಸಿನಲ್ಲಿದ್ದ ತಮಿಳುನಾಡು ಕೃಷಿ ವಿವಿಯ ಮೂವರು ವಿದ್ಯಾರ್ಥಿನಿಯರು ಜೀವಂತ ದಹಿಸಿಹೋಗಿದ್ದರು. ಕೆಳಕೋರ್ಟ್ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್ ಶಿಕ್ಷೆಯನ್ನು ದೃಢಪಡಿಸಿದ ಬಳಿಕ ವಿಚಾರಣೆ ನ್ಯಾಯಾಲಯವು ಜ.10ಕ್ಕೆ ಶಿಕ್ಷೆಜಾರಿಯನ್ನು ನಿಗದಿಮಾಡಿತ್ತು.
|