ಹೊಸ ವರ್ಷದ ಸಂಭ್ರಮದಲ್ಲಿ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಶಂಕಿತರ ಗುರುತು ಪತ್ತೆಗೆ ಶನಿವಾರ ಮುಂಬೈನಲ್ಲಿ ಪರೇಡ್ ನಡೆಸಲಾಗುವುದು. ಮಹಿಳೆಯರಿಗೆ ಕಿರುಕುಳ ನೀಡಿದ ಗುಂಪಿನ ಛಾಯಾಚಿತ್ರ ತೆಗೆದ ಛಾಯಾಗ್ರಾಹಕರಿಗೆ ಶಂಕಿತರನ್ನು ಗುರುತಿಸುವಂತೆ ಕರೆನೀಡಲಾಗಿದೆ. ಗುರುವಾರ ರಾತ್ರಿ ಬಂಧಿಸಲಾದ 14 ಪುರುಷರನ್ನು ಈಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಹೊಸ ವರ್ಷದ ದಿನ ಜುಹು ಪ್ರದೇಶದ ಮ್ಯಾರಿಯೆಟ್ ಹೊಟೆಲ್‌ನಿಂದ ಇಬ್ಬರು ಅನಿವಾಸಿ ಭಾರತೀಯ ಮಹಿಳೆಯರನ್ನು ಪುರುಷರ ದೊಡ್ಡ ಗುಂಪು ಸುತ್ತುವರಿದು ಲೈಂಗಿಕ ಕಿರುಕುಳ ನೀಡಿತ್ತು. ಪತ್ರಿಕಾ ಛಾಯಾಗ್ರಾಹಕರು ಕ್ಯಾಮೆರಾದಲ್ಲಿ ಚಿತ್ರಗಳನ್ನು ಸೆರೆಹಿಡಿದ ಬಳಿಕ ಈ ಘಟನೆಯು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಭಾರೀ ಸಾರ್ವಜನಿಕ ಪ್ರತಿಭಟನೆ ಬಳಿಕ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದರು.
ರಾಜ್ಯ ಸರ್ಕಾರವು ಈ ಪ್ರಕರಣಕ್ಕಾಗಿ ತ್ವರಿತಗತಿಯ ನ್ಯಾಯಾಲಯಕ್ಕೆ ಆದೇಶ ನೀಡಿತು ಮತ್ತು ಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಅವರು ಪೊಲೀಸ್ ಆಯುಕ್ತರಿಗೆ ತಿಳಿಸಿದ್ದರು.
|