ಆಧುನಿಕ ವೈದ್ಯಪದ್ಧತಿ ಅನುಸರಿಸುವ ವೈದ್ಯರ ವಿರುದ್ಧ ಯೋಗ ಗುರು ಬಾಬಾ ರಾಮದೇವ್ ಪ್ರತಿಕ್ರಿಯೆ ಮತ್ತು ಕ್ಯಾನ್ಸರ್ ಕಾಯಿಲೆ ಗುಣಪಡಿಸುವ ಅವರ ಹೇಳಿಕೆ ಬಗ್ಗೆ ಭಾರತೀಯ ವೈದ್ಯ ಮಂಡಳಿ ಶನಿವಾರ ಟೀಕಾಪ್ರಹಾರ ಮಾಡಿದೆ. ಪ್ರಸ್ತುತ ಯೋಗ ಶಿಬಿರದ ಸಂದರ್ಭದಲ್ಲಿ, "ವೈದ್ಯರು ರೋಗಗಳ ಪ್ರಸಾರಕರು ಮತ್ತು ರೋಗಿಯ ಕಾಯಿಲೆಯ ಲಾಭ ಪಡೆದು ಧನ ಸಂಪಾದಿಸುವವರು" ಎಂದು ರಾಮ್‌ದೇವ್ ಪ್ರತಿಕ್ರಿಯಿಸಿದ್ದರು.
ಈ ಬಗ್ಗೆ ಗಮನಸೆಳೆದ ಐಎಂಎ ಕ್ಯಾನ್ಸರ್ ಮತ್ತು ಏಡ್ಸ್ ಮುಂತಾದ ಕಾಯಿಲೆಗಳನ್ನು ಯೋಗದ ವಿಧಾನವಾದ ಪ್ರಾಣಾಯಾಮದ ಮೂಲಕ ಗುಣಪಡಿಸುವ ಅವರ ಹೇಳಿಕೆಗೆ ಸವಾಲೆಸೆದಿದೆ. ವೈದ್ಯರು ಪ್ರಾಮಾಣಿಕತೆಯಿಂದ ರೋಗ ಗುಣಪಡಿಸಿ ರೋಗಿಗಳ ಸಂಕಷ್ಟವನ್ನು ನೀಗುತ್ತಾರೆ ಎಂದು ಐಎಂಎ ಅಧ್ಯಕ್ಷ ಅಶೋಕ್ ಆಧವ್ ತಿಳಿಸಿದರು.
ಬಾಬಾ ರಾಮದೇವ್ ನಿಜವಾಗಲೂ ಪ್ರಾಮಾಣಿಕರಾಗಿದ್ದರೆ ಇಲ್ಲಿನ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಲಿ ಎಂದು ಅವರು ಸವಾಲು ಹಾಕಿದರು.
ಅನರ್ಹ ವೈದ್ಯರಿಂದ ಕ್ಯಾನ್ಸರ್ ರೋಗಿಗಳನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ರಾಮದೇವ್ ವಿಶ್ವಾಸಾರ್ಹತೆ ಪರೀಕ್ಷಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
|