ರಾಜಧಾನಿ ದೆಹಲಿಯಲಿಯ ಕೊಳಗೇರಿ ಪ್ರದೇಶವೊಂದರಲ್ಲಿ ಭಾನುವಾರ ನಸುಕಿನ ವೇಳೆ ಉಂಟಾದ ಭಾರಿ ಬೆಂಕಿ ಅಪಘಾತದಲ್ಲಿ ಕನಿಷ್ಟ ಏಳು ಜನರು ಸಾವನ್ನಪ್ಪಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ದೆಹಲಿಯ ಲಾಹೋರಿ ಗೇಟ್ ಸಮೀಪದ ಕೊಳಗೇರಿ ಪ್ರದೇಶದಲ್ಲಿ ಸುಮಾರು 2.45ರ ವೇಳೆಗೆ ಈ ಅನಾಹುತ ಉಂಟಾಗಿದ್ದು, ಪ್ರದೇಶದಲ್ಲಿದ್ದ ಅನೇಕ ಜೋಪಡಿಗಳು ನಾಶವಾಗಿ ಎಂದು ಅವರು ಹೇಳಿದರು.
ಘಟನಾ ಸ್ಥಳಕ್ಕೆ ಕೂಡಲೇ 25 ಅಗ್ನಿಶಾಮಕ ದಳದವರು ಧಾವಿಸಿದ್ದು, 250 ಗುಡಿಸಲುಗಳಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದರು ಎಂದು ಅವರು ತಿಳಿಸಿದರು.
ಬೆಂಕಿಯಿಂದ ಸುಟ್ಟುಹೋದ ಸುಮಾರು ಏಳು ಮೃತದೇಹಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಗಾಯಗೊಂಡ ಅನೇಕ ಮಂದಿಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಮುಖ್ಯ ಅಗ್ನಿಶಾಮಕದಳ ಅಧಿಕಾರಿ ಆರ್.ಸಿ.ಶರ್ಮಾ ತಿಳಿಸಿದ್ದಾರೆ.
ಅಗ್ನಿಗೆ ಬಲಿಯಾದವರು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದರು ಎಂದು ಉತ್ತರ ಜಿಲ್ಲಾಧಿಕಾರಿ ದೇವೇಶ್ ಶ್ರೀವತ್ಸ ಹೇಳಿದ್ದಾರೆ. ಗಾಯಾಳುಗಳನ್ನು ಲೋಕ್ ನಾಯಕ್ ಜಯಪ್ರಕಾಶ್ ಆಸ್ಪತ್ರೆಗೆ ಸೇರಿಸಲಾಗಿದೆ.
ಐದು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಟ ಎಂಟು ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತದೆ ಎಂದು ಉತ್ತರ ದೆಹಲಿಯ ಪೊಲೀಸ್ ಕಂಟ್ರೋಲ್ ರೂಮ್ ತಿಳಿಸಿದೆ.
|