ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಜಯದೊಂದಿಗೆ ಬಿಜೆಪಿ ಚೈತನ್ಯಭರಿತವಾಗಿರುವ ನಡುವೆ, ಮುಂದಿನ ಕ್ರಮವನ್ನು ಕುರಿತು ಚರ್ಚಿಸಲು ಸಂಯುಕ್ತ ರಾಷ್ಟ್ರೀಯ ಪ್ರಗತಿಪರ ಒಕ್ಕೂಟವು ಸೋಮವಾರ ಇಲ್ಲಿ ಸಭೆ ಸೇರಲಿದೆ. ಭಲಿಯ ಲೋಕಸಭೆ ಮರುಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜಯದ ನೇಪಥ್ಯದಲ್ಲಿ ಕೂಡ ಈ ಸಭೆ ನಡೆಸಲಾಗುತ್ತಿದೆ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ನಾವು ಸಭೆ ಸೇರುತ್ತಿದ್ದೇವೆ ಎಂದು ಟಿಡಿಪಿ ನಾಯಕ ಕೆ. ಯೆರ್ರಂ ನಾಯ್ಡು ತಿಳಿಸಿದರು.
ಸರ್ಕಾರದಿಂದ ರೈತ ಸ್ನೇಹಿ ನೀತಿಗೆ ಒತ್ತಾಯಿಸಲು ಮುಖ್ಯವಾಗಿ ಗಮನಹರಿಸಲಾಗುವುದು ಎಂದು ಅವರು ನುಡಿದರು.ತೃತೀಯ ರಂಗ ಎಂದು ಕರೆಯಲಾಗುವ ಯುಎನ್‌ಪಿಎ ವಿಜಯವಾಡ ಮತ್ತು ದೆಹಲಿಯಲ್ಲಿ ರಾಲಿಗಳನ್ನು, ವಿಚಾರಸಂಕಿರಣಗಳನ್ನು ಆಯೋಜಿಸಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಚರ್ಚೆಗೆ ಮತ್ತಷ್ಟು ಸಭೆಗಳನ್ನು ನಡೆಸಲು ಯೋಜಿಸಿದೆ.
ಯುಎನ್‌ಪಿಎ ಅಧ್ಯಕ್ಷ ಮತ್ತು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್, ಅದರ ವಕ್ತಾರ ಅಮರ್ ಸಿಂಗ್, ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು, ಐಎನ್‌ಎಲ್‌ಡಿ ಮುಖಂಡ ಓಂ ಪ್ರಕಾಶ್ ಚೌಟಾಲಾ, ಅಸ್ಸಾಂ ಗಣ ಪರಿಷದ್ ಮುಖಂಡ ಬೃಂದಾಬನ್ ಗೋಸ್ವಾಮಿ ಈ ಸಭೆಯಲ್ಲಿ ಭಾಗವಹಿಸುವರೆಂದು ನಿರೀಕ್ಷಿಸಲಾಗಿದೆ.
|