ಕೆಲವು ಕಾಂಗ್ರೆಸ್ ನಾಯಕರು ತಮ್ಮನ್ನು ನಿವಾರಿಸಲು ಸಂಚು ಹೂಡಿದ್ದಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ಆರೋಪವನ್ನು ಕಾಂಗ್ರೆಸ್ ಸೋಮವಾರ ತಳ್ಳಿಹಾಕಿದೆ.
"ಅವರು ಅಂತಹ ಆರೋಪವನ್ನು ಏಕೆ ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಉತ್ತರಪ್ರದೇಶದ ಇಡೀ ಪೊಲೀಸ್ ಪಡೆ ಅವರ ಬೆನ್ನಹಿಂದಿದೆ. ಎಲ್ಲಾ ಕಮಾಂಡೊಗಳ ರಕ್ಷಣೆ ಅವರಿಗಿದೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ವರದಿಗಾರರಿಗೆ ತಿಳಿಸಿದರು. ಉತ್ತರಪ್ರದೇಶದಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿ ವಹಿಸಿರುವ ಸಿಂಗ್, ಕೇಂದ್ರ ಸರ್ಕಾರವು ಅಂತಹ ಪಿತೂರಿಗಳಲ್ಲಿ ಎಂದೂ ಪಾಲ್ಗೊಳ್ಳುವುದಿಲ್ಲ ಮತ್ತು ವಿಶೇಷವಾಗಿ ಕಾಂಗ್ರೆಸ್ ಅಂತಹ ವಿಷಯಗಳಲ್ಲಿ ಎಂದಿಗೂ ಭಾಗಿಯಲ್ಲ ಎಂದು ಅವರು ನುಡಿದರು.
ಕೆಲವು ಕಾಂಗ್ರೆಸ್ ನಾಯಕರು ತಮ್ಮ ನಿವಾರಣೆಗೆ ಯತ್ನಿಸುತ್ತಿದ್ದಾರೆ ಮತ್ತು ತಾವು ಮಾಫಿಯಾ ಎಂದು ತಳ್ಳಿಹಾಕಿರುವ ಉಚ್ಚಾಟಿತ ಬಿಎಸ್‌ಪಿ ಸಂಸದ ಅತಿಖ್ ಅಹ್ಮದ್ ಅವರಿಗೆ ರಕ್ಷಣೆ ನೀಡಿದ್ದಾರೆಂಬ ಮಾಯಾವತಿ ಆರೋಪಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಕೂಟವು ಸಹ ತಮಗೆ ಕಿರುಕುಳ ನೀಡುವ ಮತ್ತು ನಕಲಿ ಪ್ರಕರಣಗಳಲ್ಲಿ ಸಿಕ್ಕಿಸುವ ಬಿಜೆಪಿ ಸರ್ಕಾರಗಳ ದಾರಿಯನ್ನೇ ಹಿಡಿದಿದೆ ಎಂದು ಕೂಡ ಮಾಯಾವತಿ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದ್ದರು. ಕೇಂದ್ರಕ್ಕೆ ಬೆಂಬಲ ನೀಡುವ ವಿಷಯದ ಬಗ್ಗೆ ತಾವು ಜ.15ರ ನಂತರ ಪಕ್ಷದ ಪದಾಧಿಕಾರಿಗಳು ಮತ್ತು ಶಾಸಕರ ಸಭೆ ಕರೆಯುವುದಾಗಿ ಅವರು ತಿಳಿಸಿದರು.
|