ಛತ್ತೀಸ್‌ಗಢದ ದಾಂತೇವಾಡ ಜೈಲಿನಿಂದ ನಕ್ಸಲೀಯರು ಸೇರಿದಂತೆ 299 ಕೈದಿಗಳ ಜೈಲ್‌ಬ್ರೇಕ್ ಘಟನೆ ನಡೆದ ಬೆನ್ನಹಿಂದೆಯೇ ಜಲಂಧರ್ ಕೇಂದ್ರೀಯ ಜೈಲಿಗೆ ಸೋಮವಾರ ನೂರಾರು ಕೈದಿಗಳು ಅಗ್ನಿಸ್ಪರ್ಶ ಮಾಡಿದ ಆಘಾತಕಾರಿ ಘಟನೆ ವರದಿಯಾಗಿದೆ. ಜೈಲಿನ ಕೈದಿಗಳಿಗೆ ಕಿರುಕುಳ ಮತ್ತು ಚಿತ್ರಹಿಂಸೆಯ ಆರೋಪಗಳನ್ನು ಮಾಡಿದ ಬಳಿಕ ಕೈದಿಗಳು ಮತ್ತು ಜೈಲು ಸಿಬ್ಬಂದಿ ನಡುವೆ ಭೀಕರ ಘರ್ಷಣೆ ಸಂಭವಿಸಿತೆಂದು ವರದಿಯಾಗಿದೆ.
ಇದರಿಂದ ಉದ್ರಿಕ್ತರಾದ ಕೈದಿಗಳು ಜೈಲಿಗೆ ಬೆಂಕಿಹಚ್ಚಿದರೆಂದು ತಿಳಿದುಬಂದಿದೆ. ಈಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಐವರು ಅಸುನೀಗಿದ್ದು, 30 ಜನರಿಗೆ ಗಂಭೀರ ಗಾಯಗಳಾಗಿವೆ. ವರದಿಗಳ ಪ್ರಕಾರ ನಡೆದ ಘಟನೆ ಹೀಗಿದೆ:
ತಮ್ಮ ಸಹ ಕೈದಿಯೊಬ್ಬನ ತಲೆಯ ಕೂದಲನ್ನು ಜೈಲಿನ ಅಧಿಕಾರಿಗಳು ಬಲಾತ್ಕಾರದಿಂದ ಕತ್ತರಿಸಿ ಕೆಟ್ಟದಾಗಿ ವರ್ತಿಸಿದನ್ನು ಪ್ರತಿಭಟಿಸಲು ಕೈದಿಗಳು ಉಪವಾಸ ಮುಷ್ಕರದಲ್ಲಿ ನಿರತರಾಗಿದ್ದರು.ಉಪವಾಸ ಮುಷ್ಕರ ನಿಲ್ಲಿಸುವಂತೆ ಜೈಲಿನ ಅಧಿಕಾರಿಗಳು ಬಲವಂತ ಮಾಡಿದರು.
ಕೈದಿಗಳು ಅವರ ಮಾತಿಗೆ ಬಗ್ಗದಿದ್ದಾಗ ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಲಾಯಿತು. ಆಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಕೈದಿಗಳು ದಾಂಧಲೆ ಆರಂಭಿಸಿ, ಜೈಲಿಗೆ ಬೆಂಕಿ ಹಚ್ಚಿದರು, ಜೈಲು ಸಿಬ್ಬಂದಿಯ ಮೇಲೆ ಕಲ್ಲುತೂರಾಟ ನಡೆಸಿದರು.
ಜೈಲಿನ ಅಧಿಕಾರಿಗಳು ನಿಖರ ಕಾರಣವನ್ನು ತಿಳಿಸಿಲ್ಲವಾದರೂ ಪೊಲೀಸರು ಗುಂಡು ಹಾರಿಸಿದಾಗ ಕೈದಿಯೊಬ್ಬ ಸತ್ತಿದ್ದರಿಂದ ಅವರು ರೊಚ್ಚಿಗೆದ್ದರೆಂದು ಖಚಿತಪಡಿಸದ ಮೂಲಗಳು ಹೇಳಿವೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ವಾಹನಗಳನ್ನು ಬಳಸಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆಂದು ತಿಳಿದುಬಂದಿದೆ.
|