ಪಾಲಾರ್ ನದಿ ನೀರು ಬಳಸಿ ಜಲಾಶಯ ನಿರ್ಮಿಸುವ ವಿವಾದಕ್ಕೆ ಸಂಬಂಧಿಸಿದಂತೆ ತಮಿಳ್ನಾಡು ಮತ್ತು ಆಂಧ್ರಪ್ರದೇಶದ ನಡುವೆ ಉದ್ಭವಿಸಿರುವ ವಿವಾದದ ಕುರಿತಂತೆ ಮಧ್ಯಪ್ರವೇಶಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠವು ಪ್ರಕರಣದ ಕುರಿತು ಸಂಕ್ಷಿಪ್ತ ವಿಚಾರಣೆ ನಡೆಸಿದ ಬಳಿಕ ಮುಂದಿನ ವಿಚಾರಣೆಗಾಗಿ ಪ್ರಕರಣವನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.
ಕುಪ್ಪಂ ಪ್ರದೇಶದಲ್ಲಿ ಆಂಧ್ರಪ್ರದೇಶ ನಿರ್ಮಿಸಲುದ್ದೇಶಿಸಿರುವ ಜಲಾಶಯ ಯೋಜನೆಯನ್ನು ಮುಂದುವರಿಸದಂತೆ ತಡೆಯೊಡ್ಡಲು ತಮಿಳ್ನಾಡು ನ್ಯಾಯಾಲಯದ ನಿರ್ದೇಶನ ಕೋರಿದೆ. ನ್ಯಾಯಾಲಯದಲ್ಲಿ ತಮಿಳ್ನಾಡನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕೆ.ಪರಾಸರನ್ ಅವರು ವಾದಮಂಡನೆಯು ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶ ಪರ ವಕೀಲ ರಾಕೇಶ್ ದ್ವಿವೇದಿ ಅವರು ತಮಿಳ್ನಾಡಿನ ದಾವೆ ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ. ಪಾಲಾರ್ ನದಿಯು ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳ್ನಾಡು ಮೂಲಕ ಹರಿಯುತ್ತದೆ.
ಆಂಧ್ರದ ಜಲಾಶಯ ನಿರ್ಮಾಣ ಯೋಜನೆಯು, ನದಿನೀರನ್ನೆ ನೆಚ್ಚಿಕೊಂಡಿರುವ ತಮಿಳ್ನಾಡು ಜನತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಮಿಳ್ನಾಡು ವಾದಿಸಿದೆ.
|