ದೇಶದ ಆರ್ಥಿಕತೆಯ ಸಮಗ್ರ ಬೆಳವಣಿಗೆಯನ್ನು ಪ್ರಧಾನಮಂತ್ರಿ ಮನಮೋಹನ ಸಿಂಗ್ ಮಂಗಳವಾರ ಶ್ಲಾಘಿಸಿದರು. ಒಟ್ಟು ಆಂತರಿಕ ಉತ್ಪನ್ನದ ಶೇ.9-10 ಬೆಳವಣಿಗೆ ಸಾಧನೆಗೆ ಮತ್ತು ಸುಸ್ಥಿರತೆಗೆ ಪರಿಸ್ಥಿತಿ ಅನುಕೂಲಕರವಾಗಿದೆ ಎಂದೂ ಅವರು ಹೇಳಿದರು. 6ನೇ ಪ್ರವಾಸಿ ಭಾರತೀಯ ದಿವಸವನ್ನು ಉದ್ಘಾಟಿಸಿದ ಸಿಂಗ್ , ಉನ್ನತ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ಉಳಿತಾಯಗಳು ಮತ್ತು ಬಂಡವಾಳ ದರಗಳನ್ನು ಹೆಚ್ಚಿಸಬೇಕೆಂದು ತಿಳಿಸಿದರು.
ಮಾರಿಷಿಯಸ್ ಪ್ರಧಾನ ಮಂತ್ರಿ ಡಾ. ನವೀನ್‌ಚಂದ್ರ ರಾಂಗುಲಾಂ ಅವರು ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಮೂರು ದಿನಗಳ ಸಮಾವೇಶದಲ್ಲಿ 1000ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವರೆಂದು ನಿರೀಕ್ಷಿಸಲಾಗಿದೆ.
ಚೀನದ ಬಳಿಕ ಎರಡನೇ ದೊಡ್ಡ ಆರ್ಥಿಕ ರಾಷ್ಟ್ರವಾಗಿರುವ ಭಾರತವು ಕಳೆದ ನಾಲ್ಕು ವರ್ಷಗಳಲ್ಲಿ ಸರಾಸರಿ ಶೇ.8.6ರಷ್ಟು ಬೆಳವಣಿಗೆ ಸಾಧಿಸಿದ್ದು, ಮಾರ್ಚ್‌ನಲ್ಲಿ ಮುಕ್ತಾಯವಾಗುವ ವಿತ್ತೀಯ ವರ್ಷದಲ್ಲಿ ಇದೇ ಮಟ್ಟದ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.
ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಜ್ಞಾನಾಧಾರಿತ ಆರ್ಥಿಕತೆ, ಸಂಸ್ಕೃತಿ, ಮಹಿಳೆ ಅಧಿಕಾರ ಮತ್ತು ನಾಯಕತ್ವ, ವ್ಯಾಪಾರ, ಉದ್ದಿಮೆ, ಮೂಲಸೌಲಭ್ಯ, ಪಾಲುದಾರಿಕೆ ಅವಕಾಶಗಳು ಮುಂತಾದ ಪ್ರಮುಖ ವಿಷಯಗಳನ್ನು ಚರ್ಚಿಸಲಾಗುವುದು. ಈ ಸಾಮಾಜಿಕ ವಿಷಯಗಳನ್ನು ಪಿಬಿಡಿ ಪ್ರಸ್ತಾಪಿಸಿ ಅನಿವಾಸಿ ಭಾರತೀಯರಿಗೆ ಅವರ ಅಭಿಪ್ರಾಯ ಮಂಡನೆಗೆ ಮತ್ತು ಭಾಗಿವಹಿಸುವ ವಿಧಾನಗಳ ಬಗ್ಗೆ ಅವಕಾಶ ನೀಡಲಾಗುವುದು. ಸಾಗರೋತ್ತರ ಭಾರತೀಯರ ವಿಷಯಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವುದರಿಂದ ಕೊಲ್ಲಿ, ಏಷ್ಯ ಪೆಸಿಫಿಕ್, ಆಫ್ರಿಕಾ, ಯೂರೋಪ್ ಮತ್ತು ಅಮೆರಿಕಕ್ಕೆ ಪ್ರತ್ಯೇಕ ಸಭೆಗಳನ್ನು ನಡೆಸಲಾಗುವುದು. ಸಾಗರೋತ್ತರದ 12 ಕೇಂದ್ರ ಸಚಿವರು ಮತ್ತು 6 ಸಚಿವರು ಈ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
|