ಉತ್ತರಪ್ರದೇಶದಲ್ಲಿ ವಿದ್ಯಾರ್ಥಿಗಳು ಮತ್ತು ಸಮಾಜವಾದಿ ಕಾರ್ಯಕರ್ತರು ಬುಧವಾರ ನಡೆಸಿದ ಪ್ರತಿಭಟನೆ ಹಿಂಸಾಸ್ವರೂಪಕ್ಕೆ ತಿರುಗಿದಾಗ ಪೊಲೀಸರು ಗೋಲೀಬಾರ್ ನಡೆಸಿ ಕನಿಷ್ಠ ಇಬ್ಬರು ಸತ್ತಿದ್ದಾರೆ ಮತ್ತು ಅನೇಕ ಮಂದಿ ಗಾಯಗೊಂಡಿದ್ದಾರೆ. ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಗ್ರಾಮ ಸಫಾಯಿಯಲ್ಲಿ ಈ ಘಟನೆ ಸಂಭವಿಸಿದೆ.
ಮುಲಾಯಂ ಸೋದರ ಮತ್ತು ಸಮಾಜವಾದಿ ಪಕ್ಷದ ಹಿರಿಯ ನಾಯಕ ಶಿವಪಾಲ್ ಸಿಂಗ್ ಅವರ ಮೇಲೆ ಲಕ್ನೋ ಪೊಲೀಸ್ ಸಿಬ್ಬಂದಿ ಮಂಗಳವಾರ ರಾತ್ರಿ ಥಳಿಸಿದ ಘಟನೆಯಿಂದ ಎಸ್‌ಪಿ ಕಾರ್ಯಕರ್ತರು ಪ್ರತಿಭಟನೆಗೆ ಇಳಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಸರ್ಕಾರ ರಾಜ್ಯದಲ್ಲಿ ವಿದ್ಯಾರ್ಥಿ ಸಂಘಟನೆ ಚುನಾವಣೆ ರದ್ದುಮಾಡಿದ್ದರ ವಿರುದ್ಧ ಎಸ್‌ಪಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾಗ ಪೊಲೀಸ್ ಸಿಬ್ಬಂದಿ ಶಿವಪಾಲ್ ಸಿಂಗ್ ಅವರನ್ನು ಥಳಿಸಿದರೆಂದು ವರದಿಯಾಗಿದೆ.
ಪಕ್ಷದ ಹಿರಿಯ ನಾಯಕರನ್ನು ಥಳಿಸಿದ್ದರಿಂದ ಆಕ್ರೋಶಿತವಾದ ಸಮಾಜವಾದಿ ಪಕ್ಷ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿ ಮಾಯಾವತಿ ರಾಜೀನಾಮೆಗೆ ಆಗ್ರಹಿಸಿತು. ಸಫಾಯಿಯಲ್ಲಿ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ತಾಳಿದಾಗ ವಿದ್ಯಾರ್ಥಿಗಳು ಮತ್ತು ಎಸ್‌ಪಿ ಕಾರ್ಯಕರ್ತರ ಮೇಲೆ ಗೋಲೀಬಾರ್ ನಡೆಸಲಾಯಿತು.
ಈ ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಸತ್ತು, ಇನ್ನೂ ಅನೇಕ ಮಂದಿ ಗಾಯಗೊಂಡರು. ಪ್ರತಿಭಟನೆಕಾರರು ಬಳಿಕ ಆಸ್ತಿಪಾಸ್ತಿಗಳ ಮೇಲೆ ದಾಂಧಲೆ ಮಾಡಿದರು ಮತ್ತು ಬಸ್‌ಗಳಿಗೆ ಬೆಂಕಿ ಹಚ್ಚಿದರು.ವಾರಾಣಸಿ, ಅಲಹಾಬಾದ್ ಮತ್ತಿತರ ಕಡೆಗಳಿಂದ ಹಿಂಸಾಚಾರದ ವರದಿಗಳು ಬರುತ್ತಿವೆ.
ಘರ್ಷಣೆಗಳ ಹಿನ್ನೆಲೆಯಲ್ಲಿ ಎಸ್‌ಪಿ ಮುಖ್ಯಸ್ಥ ಮುಲಾಯಂ ಯಾದವ್ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದು, ನಿಶ್ಯಸ್ತ್ರ ಪ್ರತಿಭಟನೆಕಾರರ ವಿರುದ್ಧ ಗೋಲೀಬಾರ್ ಮಾಡಿದ ಕ್ರಮ ಕೊಲೆಗೆ ಸಮನಾಗಿದೆ ಎಂದು ಹೇಳಿದ್ದಾರೆ.
|