ಓದಿನಲ್ಲಿ ಹಿಂದಿದ್ದ ತನ್ನನ್ನು ನಿಂದಿಸಿದ ಇಬ್ಬರು ಉಪನ್ಯಾಸಕಿಯರ ನಕಲಿ ಪ್ರೊಫೈಲ್ ಸೃಷ್ಟಿಸಿ, ಅಶ್ಲೀಲ ಬರಹಗಳನ್ನು ಓರ್ಕುಟ್ ತಾಣದಲ್ಲಿ ಪ್ರಕಟಿಸಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಸೈಬರ್ ಅಪರಾಧ ಪೊಲೀಸರು ಗೂಗಲ್ ಸಹಾಯದಿಂದ ಬಂಧಿಸಿದ್ದಾರೆ.
ಪೆರುಂಬವೂರ್ ಸಮೀಪದ ಮಾರಂಪಿಲ್ಲಿಯ ಎಂಇಎಸ್ ಕಾಲೇಜಿನ ಎರಡನೇ ವರ್ಷದ ಬಿ.ಕಾಂ ವಿದ್ಯಾರ್ಥಿ ನಾಡಿರ್ ಎಂಬಾತನೇ ಬಂಧಿತ. ಮಾಹಿತಿ ತಂತ್ರಜ್ಞಾನ ಕಾಯಿದೆಯ 67ನೇ ಸೆಕ್ಷನ್ ಅಡಿಯಲ್ಲಿ ಗುರುವಾರ ಅವನನ್ನು ಬಂಧಿಸಲಾಗಿದೆ.
ಈ ಉಪನ್ಯಾಸಕಿಯರಿಗೆ ಅಶ್ಲೀಲ ಕರೆಗಳು ಬಂದಾಗ ಈತನ ಕೃತ್ಯ ಬೆಳಕಿಗೆ ಬಂದಿತ್ತು. ಕೆಲವು ಕರೆಗಳು ವಿದೇಶದಿಂದಲೂ ಬರುತ್ತಿದ್ದವು. ಉಪನ್ಯಾಸಕಿಯರು ಈ ಕುರಿತು ನೀಡಿದ ದೂರಿನ ಅನುಸಾರ ಕಾಲೇಜು ಪ್ರಿನ್ಸಿಪಾಲರು ಎಸ್ಪಿ ಎಂ.ಪದ್ಮನಾಭನ್‌ರನ್ನು ಸಂಪರ್ಕಿಸಿದರು. ಪ್ರಕರಣವನ್ನು ಸೈಬರ್ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಯಿತು.
ಗೂಗಲ್ ಸಹಾಯದಿಂದ ತನಿಖೆ ಮುಂದುವರಿಸಿದ ಪೊಲೀಸರು, ಬಳಕೆದಾರ ಐಡಿಯ ಜಾಡು ಹಿಡಿದು, ನಾಡಿರ್‌ನನ್ನು ಬಂಧಿಸಲಾಯಿತು. ಓರ್ಕುಟ್ ಎಂಬ ಸಮುದಾಯ ತಾಣದಲ್ಲಿ ಇಬ್ಬರು ಉಪನ್ಯಾಸಕಿಯರ ನಕಲಿ ಫೋಟೋ ಸಹಿತ ನಕಲಿ ಪ್ರೊಫೈಲ್ ಸೃಷ್ಟಿಸಿ ಅವರ ಅಸಲಿ ಫೋನ್ ನಂಬರುಗಳನ್ನು ನೀಡಿದ್ದಾಗಿ ನಾಡಿರ್ ತಪ್ಪೊಪ್ಪಿಕೊಂಡಿದ್ದಾನೆ.
ತ್ರಿಶೂರು ಮತ್ತು ಅಳುವಾದ ಇಂಟರ್ನೆಟ್ ಕೆಫೆಗಳಲ್ಲಿ ಕುಳಿತು ಈ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಲಾಗಿತ್ತು. ಕೆಫೆಯಲ್ಲಿದ್ದ ರಿಜಿಸ್ಟರ್ ನೋಡಿಕೊಂಡು ಪೊಲೀಸರು ನಾಡಿರ್ ಹೆಸರು, ವಿಳಾಸ ಇತ್ಯಾದಿ ವಿವರ ಪಡೆಯುವಲ್ಲಿ ಯಶಸ್ವಿಯಾದರು.
ಈ ವಿದ್ಯಾರ್ಥಿ ಕಾಲೇಜಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ ಮತ್ತು ಓದಿನಲ್ಲೂ ತುಂಬಾ ಹಿಂದಿರುವ ಬಗ್ಗೆ ಉಪನ್ಯಾಸಕಿಯರು ಆತನ ಹೆತ್ತವರಿಗೆ ಹೇಳಿದ್ದರು. ಇದೇ ಕೋಪದಿಂದ ಆತ ಈ ರೀತಿ ಮಾಡಿದ್ದಾನೆ.
|