ನಗರದ ಅತಿದೊಡ್ಡ ಸಗಟು ಮಾರುಕಟ್ಟೆಯಾದ ಬಡಾಬಜಾರ್ ಪ್ರದೇಶದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಸುಮಾರು 2500ಕ್ಕೂ ಹೆಚ್ಚು ಮಳಿಗೆಗಳು ಹಾಗೂ ಏಳು ಬಹುಮಹಡಿ ಕಟ್ಟಡಗಳು ಭಸ್ಮವಾಗಿ, ಕೋಟ್ಯಂತ ರೂಪಾಯಿ ನಷ್ಟ ಸಂಭವಿಸಿದೆ.
ನಸುಕು ಹರಿಯುವ ಮುನ್ನ 2 ಗಂಟೆ ರಾತ್ರಿ ಸುಮಾರಿಗೆ ಜಮ್ನಾಲಾಲ್ ಬಜಾಜ್ ಬೀದಿಯ ಮನೆಯೊಂದರಲ್ಲಿ ಹೊತ್ತಿಕೊಂಡ ಬೆಂಕಿಯು ಇಡೀ ಮಾರುಕಟ್ಟೆಗೆ ವ್ಯಾಪಿಸಿತು. ಮೂರು ಡಜನ್‌ಗೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹೆಣಗಾಡಿದವು.
ಸ್ಥಳೀಯರು ಹೇಳುವಂತೆ, ಸಮೀಪದ ಮುಲ್ಲಿಕ್‌ಘಾಟ್ ಪಂಪಿಂಗ್ ಸ್ಟೇಶನ್‌ನಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆಯದ ಕಾರಣ, ಅಗ್ನಿಶಾಮಕ ವಾಹನಗಳಿಗೆ ತೀವ್ರ ತೊಂದರೆಯಾಗಿದೆ. ವಿದ್ಯುತ್ ವೈಫಲ್ಯವೇ ಇದಕ್ಕೆ ಪ್ರಧಾನ ಕಾರಣ.
ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದ್ದು, ಪರಿಹಾರ ಕಾರ್ಯಾಚರಣೆಗೂ ಚಾಲನೆ ನೀಡಲಾಗಿದೆ. ಹಿರಿಯ ಅಧಿಕಾರಿಗಳು, ಭದ್ರತಾ ದಳಗಳು ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿವೆ.
ಬೆಂಕಿಯ ಕಾರಣಗಳು ತಕ್ಷಣಕ್ಕೆ ತಿಳಿದುಬಂದಿಲ್ಲ ಮತ್ತು ಸಾವು ನೋವಿನ ವರದಿಗಳೂ ಲಭ್ಯವಾಗಿಲ್ಲ.
|