ಕೋಲ್ಕತಾದ ಬುರ್ರಾಬಜಾರ್ ಪ್ರದೇಶದ ನಂದಾರಾಮ್ ಮಾರುಕಟ್ಟೆ ಕಟ್ಟಡದ 13ನೇ ಮಹಡಿಯಲ್ಲಿ ವ್ಯಾಪಿಸಿರುವ ಬೆಂಕಿ ಇನ್ನೂ ತಹಬಂದಿಗೆ ಬಂದಿಲ್ಲ. ಬುರ್ರಾಬಜಾರ್‌ನಲ್ಲಿ ವ್ಯಾಪಿಸಿದ ಬೆಂಕಿಯ ಕೆನ್ನಾಲಿಗೆಯು ಶನಿವಾರ ಬೆಳಿಗ್ಗೆಯಿಂದ ಅನೇಕ ಕಟ್ಟಡಗಳಲ್ಲಿರುವ ಅಂಗಡಿಗಳನ್ನು ಆಹುತಿ ತೆಗೆದುಕೊಂಡಿದೆ.
ನಂದಾರಾಮ್ ಮಾರುಕಟ್ಟೆಯ ಕಟ್ಟಡದಲ್ಲಿ ಹಲವಾರು ಬಿರುಕುಗಳು ಕಾಣಿಸಿಕೊಂಡಿದ್ದು. ಕಟ್ಟಡವು ಸ್ವಲ್ಪ ಎಡಭಾಗಕ್ಕೆ ವಾಲಿದೆ ಮತ್ತು ಮೇಲಿನ ಕೆಲವು ಮಹಡಿಗಳಲ್ಲಿ ಬೆಂಕಿಯ ಜ್ವಾಲೆ ದಟ್ಟವಾಗಿ ಆವರಿಸಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಆದರೆ ನಂದಾರಾಂ ಕಟ್ಟಡ ತಕ್ಷಣವೇ ಕುಸಿಯಲಾರದು ಎಂದು ಎಂಜಿನಯರ್‌ಗಳು ಅಭಿಪ್ರಾಯ ತಾಳಿದ್ದು, ಸಮೀಪದ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಸೇನೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ತರುವಲ್ಲಿ ಇಂದು ಯಶಸ್ವಿಯಾಗಬಹುದೆಂದು ಅವರು ಆಶಾವಾದ ವ್ಯಕ್ತಪಡಿಸಿದರು. ಬೆಂಕಿಯಿಂದ ಉತ್ಪನ್ನವಾದ ತೀವ್ರ ಕಾವು ನೀರನ್ನು ಹೀರಿಕೊಳ್ಳುತ್ತಿದ್ದು, ಜ್ವಾಲೆ ಹರಡಲು ಕಾರಣವಾಗಿದೆ ಎಂದು ಹೇಳಿದ ಅವರು ನೀರಿನ ಸತತ ಪೂರೈಕೆ ಅಗತ್ಯವಾಗಿದೆ ಎಂದು ಹೇಳಿದರು.ನಂದಾರಾಮ್ ಮಾರುಕಟ್ಟೆಯ 13ನೇ ಮಹಡಿಯಲ್ಲಿ ಸಂಗ್ರಹಿಸಿಡಲಾದ ಡೀಸೆಲ್‌ನಿಂದ ಬಹುಶಃ ಭಾನುವಾರ ಸಂಜೆ ಸ್ಫೋಟ ಸಂಭವಿಸರಬಹುದೆಂದು ಭಾವಿಸಲಾಗಿದೆ.
|