ಒಂದು ದಿನದ ಭೇಟಿಗಾಗಿ ಬಿಗಿ ಭದ್ರತೆಯಲ್ಲಿ ತಮಿಳುನಾಡಿಗೆ ಆಗಮಿಸಿದ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಎಡಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗಳು ಮತ್ತು ತಲೆಬುರುಡೆಗಳ ಪ್ರದರ್ಶನದ ಮೂಲಕ ಸ್ವಾಗತ ನೀಡಿದವು. ಭಿತ್ತಿಚಿತ್ರಗಳನ್ನು ಹಿಡಿದ ಕಾರ್ಯಕರ್ತರು ತಲೆಬುರುಡೆಗಳನ್ನು ಪ್ರದರ್ಶಿಸಿ ಗೋಧ್ರಾದಲ್ಲಿ 2000 ಮಂದಿ ಅಮಾಯಕರ ಹತ್ಯೆಕೋರನೆಂದು ಮೋದಿಯನ್ನು ದೂರಿ ರಕ್ತಲೇಪಿತ ಕೈಗಳೊಂದಿಗೆ ನಗರಕ್ಕೆ ಹೆಜ್ಜೆಯಿಡಬಾರದೆಂದು ಒತ್ತಾಯಿಸಿದರು.
ಮೋದಿ ಗೌರವಾರ್ಥ ಭೋಜನಕೂಟ ಏರ್ಪಡಿಸಿದ್ದ ಎಐಎಡಿಎಂಕೆ ವರಿಷ್ಠೆ ಜೆ. ಜಯಲಲಿತಾ ಅವರನ್ನು ಕೂಡ ಕಾರ್ಯಕರ್ತರು ಟೀಕಿಸಿದರು.ವಿಮಾನನಿಲ್ದಾಣದಲ್ಲಿ ಬಂದಿಳಿದ ಮೋದಿಯನ್ನು ಬಿಜೆಪಿ ಅಧ್ಯಕ್ಷ ಎಲ್. ಗಣೇಶನ್ ,ಹಿರಿಯ ನಾಯಕರಾದ ಸು ತಿರುನವುಕ್ಕರಸರ್, ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್, ಬಿಜೆಪಿಯ ಮಾಜಿ ರಾಜ್ಯಸಭೆ ಸದಸ್ಯ ಮತ್ತು ತಮಿಳು ವಾರಪತ್ರಿಕೆ ತೊಗಲಕ್ ಸಂಪಾದಕ ಚೊ. ರಾಮಸ್ವಾಮಿ ಬರಮಾಡಿಕೊಂಡರು.
ಮೋದಿ ಭೇಟಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ 250ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಯಿತು. ಸೈದಾಪೇಟೆಯ ಪಣಗಲ್ ಮಾಲಿಗೈ ಬಳಿ ಪ್ರತಿಭಟನೆ ನಡೆಸಿದ 20 ಮಹಿಳೆಯರು ಸೇರಿದಂತೆ 125 ಕಾರ್ಯಕರ್ತರನ್ನು ಬಂಧಿಸಲಾಯಿತು.
ವಿಸಿಕೆ,ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ, ತಮಿಳುನಾಡು ತೌಹೀದ್ ಜಮಾತ್ ಮತ್ತು ಪೆರಿಯಾರ್ ದ್ರಾವಿಡ ಕಳಗಂ ಸೇರಿದಂತೆ 12 ಸಂಘಟನೆಗಳ ಕೂಟವು ಮೋದಿ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಉದ್ದೇಶಿಸಿದ್ದ ಕಾಮರಾಜರ್ ಅರಂಗಂಗೆ ಮುತ್ತಿಗೆ ಹಾಕುವುದಾಗಿ ಬೆದರಿಸಿದೆ. ಭೇಟಿಯ ಸಂದರ್ಭದಲ್ಲಿ ಮೋದಿ ಅವರು ಬಿಜೆಪಿ ಮುಖ್ಯಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳ ಜತೆ ಸಂವಾದಿಸಲಿದ್ದಾರೆ.
ಬಳಿಕ ಎಐಎಡಿಎಂಕೆ ನಾಯಕಿ ಜೆ.ಜಯಲಲಿತಾ ಅವರ ಪಿಯಸ್ ಗಾರ್ಡನ್ ನಿವಾಸಕ್ಕೆ ಭೋಜನಕೂಟದ ಸಲುವಾಗಿ ತೆರಳಲಿದ್ದಾರೆ. ಸಂಜೆ ತೊಘಲಕ್‌ನ 37 ಶತಮಾನೋತ್ಸವದಲ್ಲಿ ಪಾಲ್ಗೊಳ್ಳಲಿದ್ದು. ರಾತ್ರಿ ಅಹ್ಮದಾಬಾದ್‌ಗೆ ತೆರಳಲಿದ್ದಾರೆ.
|