ಹಕ್ಕಿ ಜ್ವರ ಕಾಣಿಸಿಕೊಂಡ ಒಂದು ವಾರದ ಬಳಿಕ ಪಶ್ಚಿಮಬಂಗಾಳದ ಬಿರ್ಬಮ್ ಜಿಲ್ಲೆಯಲ್ಲಿ ಕೋಳಿಗಳ ಮಾರಣಹೋಮವನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ಆ ಪ್ರದೇಶದ ಎಲ್ಲ ಕೋಳಿಗಳನ್ನು ಕುತ್ತಿಗೆ ಮುರಿಯುವ ಓಬಿರಾಯನ ಕಾಲದ ವಿಧಾನ ಅನುಸರಿಸಿ ಕೊಂದ ಬಳಿಕ ಹೂಳಲಾಗುತ್ತಿದೆ. ಕಳೆದ 12ದಿನಗಳಿಂದ ಹಕ್ಕಿಜ್ವರದಿಂದ 35,000ಕ್ಕೂ ಹೆಚ್ಚು ಕೋಳಿಗಳು ಸತ್ತಿವೆ.
ಪ್ರಯೋಗಶಾಲೆಯ ವರದಿಯಲ್ಲಿ ಹಕ್ಕಿಜ್ವರ ದೃಢಪಟ್ಟ ಬಳಿಕ ರಾಂಪುರಾಟ್‌ನ ಎರಡು ಬ್ಲಾಕ್‌ಗಳಲ್ಲಿ ಆರೋಗ್ಯಾಧಿಕಾರಿಗಳು ಕೋಳಿಗಳ ಮಾರಣಹೋಮ ಆರಂಭಿಸಿದ್ದಾರೆ. ಹಕ್ಕಿಜ್ವರದಿಂದ ಈ ಪ್ರದೇಶವನ್ನು ಮುಕ್ತಗೊಳಿಸಲು ಇನ್ನೂ ಒಂದು ವಾರ ತೆಗೆದುಕೊಳ್ಳುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಬುಧವಾರ ಸಂಜೆ ಕೊಲ್ಕತಾಗೆ ಕಳಿಸಲಾಗಿದೆ.ಕೋಳಿ ಹಂತಕರಿಗೆ ರಕ್ಷಣಾ ಕವಚ ಕಳಿಸಲು ತಡವಾಯಿತು ಎಂದು ಅಧಿಕಾರಿಗಳು ಹೇಳಿದ್ದು, ಅವನ್ನು ಈಗ ಪಶ್ಚಿಮಬಂಗಾಳಕ್ಕೆ ಕಳಿಸಿರುವುದಾಗಿ ದೃಢಪಡಿಸಿದ್ದಾರೆ.ಹಕ್ಕಿ ಜ್ವರದಿಂದ ಮಾನವರು ನರಳುವ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ದೃಢಪಡಿಸಿದರು.
|