ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಪಾತ್ರವಿದೆಯೆಂದು ಆರೋಪಿಸಲಾದ ಸಿಖ್ ವಿರೋಧಿ ಗಲಭೆಗಳ ಬಗ್ಗೆ ತನ್ನ ವರದಿ ಸಲ್ಲಿಸಲು ಸಿಬಿಐ ಬುಧವಾರ ನಗರದ ಕೋರ್ಟ್‌ನಿಂದ ಇನ್ನಷ್ಟು ಕಾಲಾವಕಾಶ ಪಡೆದಿದೆ. ತಮ್ಮ ಹೇಳಿಕೆಯನ್ನು ಅಮೆರಿಕದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದಾಖಲಿಸುವಂತೆ ಮುಖ್ಯ ಸಾಕ್ಷಿ ಜಸ್ಬೀರ್ ಸಿಂಗ್ ಸಲ್ಲಿಸಿದ ಅರ್ಜಿ ದೆಹಲಿ ಹೈಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗಬೇಕಿದೆ.
ಸಿಂಗ್ ಅವರ ಅರ್ಜಿ ಕುರಿತಂತೆ ಸಿಬಿಐಗೆ ಹೈಕೋರ್ಟ್ ನೋಟೀಸ್‌ನ್ನು ಗಣನೆಗೆ ತೆಗೆದುಕೊಂಡ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಂಜೀವ್ ಜೈನ್ ಸಿಬಿಐಗೆ ಮಾ.12ರಂದು ಸೆಕ್ಷನ್ 173 ಸಿಆರ್‌ಪಿಸಿ ಅಡಿಯಲ್ಲಿ ವರದಿ ಸಲ್ಲಿಸುವಂತೆ ತಿಳಿಸಿದೆ.
ಪ್ರಕರಣವನ್ನು ಸಮಾಪ್ತಿಗೊಳಿಸುವ ಸಿಬಿಐ ವರದಿಯನ್ನು ನಿರಾಕರಿಸಿದ ಕೋರ್ಟ್ 1984ರ ಸಿಖ್ ವಿರೋಧಿ ಗಲಭೆಯ ಮರುತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಿತ್ತು. ಪ್ರಸಕ್ತ ಕ್ಯಾಲಿಫೋರ್ನಿಯದಲ್ಲಿ ತಂಗಿರುವ ಜಸ್ಬೀರ್ ಸಿಂಗ್ ಪತ್ತೆಯಾಗದಿರುವುದರಿಂದ ಜಗದೀಶ್ ಟೈಟ್ಲರ್ ವಿರುದ್ಧ ಪ್ರಕರಣವನ್ನು ಸಮಾಪ್ತಿಗೊಳಿಸುವಂತೆ ಸಿಬಿಐ ಕಳೆದ ಸೆ.29ರಂದು ಕೋರಿಕೆ ಸಲ್ಲಿಸಿತ್ತು.ಸಿಂಗ್ ಹೇಳಿಕೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದಾಖಲಿಸುವುದು ಕಷ್ಟವೆಂದು ವಾದಿಸಿದ್ದ ಸಿಬಿಐ, ಸಿಂಗ್ ಪರಿಚಯ ಇನ್ನೂ ಸ್ಥಿರಪಟ್ಟಿಲ್ಲ ಎಂದು ಹೇಳಿತ್ತು.
|