ಮೂವರು ಎನ್‌ಸಿಪಿ ಸದಸ್ಯರು ಮತ್ತು ಪಕ್ಷೇತರ ಸದಸ್ಯ ವಿಶ್ವಜಿತ್ ರಾಣೆ ಬೆಂಬಲ ಹಿಂತೆಗೆದುಕೊಂಡಿದ್ದರಿಂದ ಗೋವಾ ಸರ್ಕಾರ ಪತನದ ಅಂಚಿಗೆ ತಲುಪಿದೆ. ಧನವಿನಿಯೋಗ ಮಸೂದೆಗೆ ಸೋಲುಂಟಾಗಬಹುದೆಂಬ ಆತಂಕದಲ್ಲಿ ವಿಧಾನಸಭೆ ಮುಂದೂಡುವ ಸರ್ಕಾರದ ಶಿಫಾರಸಿಗೆ ರಾಜ್ಯಪಾಲ ಎಸ್.ಸಿ. ಜಮೀರ್ ಅಂಗೀಕಾರ ಮುದ್ರೆ ಒತ್ತಿದರು. ಮೂವರು ಎನ್‌ಸಿಪಿ ಶಾಸಕರು ಮತ್ತು ಪಕ್ಷೇತರ ಅಭ್ಯರ್ಥಿ ವಿಶ್ವಜಿತ್ ರಾಣೆ ಸರ್ಕಾರಕ್ಕೆ ಬೆಂಬಲ ವಾಪಸಿಗೆ ನಿರ್ಧರಿಸಿದ್ದರಿಂದ 7 ತಿಂಗಳ ಅವಧಿಯ ಸರ್ಕಾರ ಉರುಳುವ ಹಂತವನ್ನು ತಲುಪಿದೆ.
ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ ಆದೇಶದೊಂದಿಗೆ ಕೇಂದ್ರ ಸಚಿವ ಸೇರಿದಂತೆ ಪಕ್ಷದ ಉನ್ನತ ನಾಯಕರಾದ ಪ್ರಫುಲ್ ಪಟೇಲ್ ಸೇರಿದಂತೆ ಮೂವರು ಶಾಸಕರನ್ನು ಭೇಟಿ ಮಾಡಿ ಬೆಂಬಲ ವಾಪಸಾತಿಯನ್ನು ಹಿಂತೆಗೆದುಕೊಳ್ಳದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆಂಬ ನಾಯಕತ್ವ ನೀಡಿದ ಎಚ್ಚರಿಕೆಯನ್ನು ಮುಟ್ಟಿಸಿದ್ದಾರೆ.ಆದರೆ ಮೂವರು ಎನ್‌ಸಿಪಿ ಶಾಸಕರು ಬಿಗಿನಿಲುವನ್ನು ತಾಳಿರುವ ನಡುವೆ ಅವರನ್ನು ಸಮ್ಮಿಶ್ರದ ಮಡಿಲಿಗೆ ಪುನಃ ತರಲು ಬಿರುಸಿನ ಚಟುವಟಿಕೆ ಆರಂಭವಾಗಿದೆ.
ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಕೂಟವು 23 ಶಾಸಕರ ಬಲವನ್ನು ಹೊಂದಿದ್ದರೆ, ಬಂಡಾಯದ ದೆಸೆಯಿಂದ ಅದು 19 ಶಾಸಕಬಲಕ್ಕೆ ಕುಸಿದಿದೆ. ರಾಜಕೀಯ ಬಿಕ್ಕಟ್ಟು ಸೃಷ್ಟಿಸುವುದು ತನ್ನ ಉದ್ದೇಶವಲ್ಲ ಎಂದು ಬೆಂಬಲ ಹಿಂತೆಗೆದುಕೊಂಡ ಶಾಸಕಲ್ಲೊಬ್ಬರಾದ ರಾಣೆ ತಿಳಿಸಿದ್ದು, ಕೆಲವು ಕುಂದುಕೊರತೆಗಳನ್ನು ಇತ್ಯರ್ಥ ಮಾಡಬೇಕು ಎಂದು ಹೇಳಿದರು.
|