ಸಿಂಗುರ್‌ನಲ್ಲಿ ಟಾಟಾ ಮೋಟರ್ಸ್ ಸಣ್ಣ ಕಾರು ತಯಾರಿಕೆ ಘಟಕಕ್ಕೆ ಭೂಸ್ವಾಧೀನ ಪ್ರಶ್ನಿಸಿದ ಎಲ್ಲ ಅರ್ಜಿಗಳನ್ನು ಕೊಲ್ಕತಾ ಹೈಕೋರ್ಟ್ ಶುಕ್ರವಾರ ವಜಾ ಮಾಡುವ ಮೂಲಕ ಎಲ್ಲ ತೊಡಕುಗಳನ್ನು ನಿವಾರಿಸಿದ್ದರಿಂದ ರತನ್ ಟಾಟಾಗೆ ನಿರಾಳವೆನಿಸಿದೆ. ಮುಖ್ಯನ್ಯಾಯಮೂರ್ತಿ ಎಸ್.ಎಸ್. ನಿಜ್ಜಾರ್ ಮತ್ತು ಪಿ.ಸಿ. ಘೋಷ್ ಅವರಿದ್ದ ವಿಭಾಗೀಯ ಪೀಠ ಮೇಲಿನ ತೀರ್ಪನ್ನು ಪ್ರಕಟಿಸಿದೆ.
ಟಾಟಾ ಮೋಟರ್ಸ್ ಸಣ್ಣ ಕಾರು ಉತ್ಪಾದನಾ ಘಟಕ ನಿರ್ಮಾಣಕ್ಕೆ 1000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದನ್ನು ಪ್ರಶ್ನಿಸಿ ಜೈದೀಪ್ ಮುಖರ್ಜಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. 1894ರ ಭೂಸ್ವಾಧೀನ ಕಾಯ್ದೆ ಮತ್ತು 1963ರ ಭೂಸ್ವಾಧೀನ ನಿಯಮಗಳನ್ನು ಪಾಲಿಸದೇ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖರ್ಜಿ ಮತ್ತು ಹೆಚ್ಚುವರಿ ಅರ್ಜಿದಾರರಾಗಿ ಸೇರಿದ ಇನ್ನೂ 10 ಮಂದಿ ಪ್ರತಿಪಾದಿಸಿದ್ದರು.
ಟಾಟಾ ಮೋಟರ್ಸ್ ಸಿಂಗುರ್‌ನಲ್ಲಿ ಸಣ್ಣ ಕಾರು ಕಾರ್ಖಾನೆ ನಿರ್ಮಿಸಲು ಇಚ್ಛಿಸಿತ್ತು ಮತ್ತು ವಿಶ್ವದಲ್ಲೇ ಅಗ್ಗದ ಕಾರು ನಾನೊ ತಯಾರಿಕೆಗೆ ನಿರ್ಮಾಣ ಕಾರ್ಯಗಳನ್ನು ಆರಂಭಿಸಿತ್ತು. ಆದರೆ ತಮ್ಮ ಇಚ್ಛೆಗೆ ವಿರುದ್ಧವಾಗಿ ಸರ್ಕಾರ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿದೆ ಎಂದು ರೈತರು ದೂರಿದ್ದರಿಂದ ಸಿಂಗುರ್ ಕಾರು ಉತ್ಪಾದನೆ ಯೋಜನೆಯಲ್ಲಿ ವಿವಾದದ ಕಿಡಿ ಸ್ಫೋಟಿಸಿತು.
ಪ್ರತಿಭಟನಾಕಾರರು ಯೋಜನೆ ಸಲುವಾಗಿ ನಿರ್ಮಿಸಿದ್ದ ಬೇಲಿಯನ್ನು ನಾಶ ಮಾಡಿ ದಾಂಧಲೆ ಎಬ್ಬಿಸಿದರು. ಕೋರ್ಟ್ ನಿರ್ಧಾರವು ಅರ್ಜಿದಾರರಿಗೆ ಹಿನ್ನೆಡೆಯಾಗಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವರೆಂದು ನಿರೀಕ್ಷಿಸಲಾಗಿದೆ.
|