ಗುಜರಾತಿನಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ಸೋಮವಾರ 11 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. 2002ರ ಫೆಬ್ರವರಿ 27ರಂದು ಅಯೋಧ್ಯೆಯಿಂದ ರಾಮಸೇವಕರನ್ನು ಒಯ್ಯುತ್ತಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಬೆಂಕಿ ದುರಂತ ಸಂಭವಿಸಿದ ಬಳಿಕ ಗುಜರಾತಿನಲ್ಲಿ ಭುಗಿಲೆದ್ದ ಕೋಮುಗಲಭೆಯಲ್ಲಿ 6 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಗಲಭೆಯ ಸಂದರ್ಭದಲ್ಲಿ ತನ್ನ ಕುಟುಂಬದವರ ಹತ್ಯೆ ಮತ್ತು ಅತ್ಯಾಚಾರಕ್ಕೆ ಬಿಲ್ಕಿಸ್ ಪ್ರಮುಖ ಸಾಕ್ಷಿಯಾಗಿದ್ದರು.
ಗುಜರಾತಿನಲ್ಲಿ ವಿಚಾರಣೆ ನಡೆದರೆ ಸಾಕ್ಷಿಗಳಿಗೆ ಗಂಡಾಂತರ ಉಂಟಾಗಬಹುದೆಂದು ಸಿಬಿಐ ಮತ್ತು ಬಿಲ್ಕಿಸ್ ಶಂಕೆ ವ್ಯಕ್ತಪಡಿಸಿದ ಬಳಿಕ ಆಗಸ್ಟ್ 2003ರಲ್ಲಿ ವಿಚಾರಣೆಯನ್ನು ಅಹಮದಾಬಾದ್ ಕೋರ್ಟ್‌ನಿಂದ ಮುಂಬೈ ಕೋರ್ಟ್‌ಗೆ ಸ್ಥಳಾಂತರಿಸಲಾಯಿತು.
ಆರೋಪಿಗಳು ಅದೇ ಗ್ರಾಮದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 17 ಜನರ ಮೇಲೆ ದಾಳಿ ಮಾಡಿದಾಗ 8 ಜನರು ಸತ್ತಿದ್ದರು ಮತ್ತು 6 ಮಂದಿ ಕಾಣೆಯಾಗಿದ್ದರು. ಜೀವವುಳಿದವರಲ್ಲಿ ಬಿಲ್ಕಿಸ್ ಕೂಡ ಒಬ್ಬರಾಗಿದ್ದು, ಪ್ರಮುಖ ಸಾಕ್ಷಿಯಾಗಿ ಹೊರಹೊಮ್ಮಿದರು.
ಈ ಪ್ರಕರಣದಲ್ಲಿ 6 ಮಂದಿ ಪೊಲೀಸ್ ಅಧಿಕಾರಿಗಳಿಗೆ ತಪ್ಪಿತಸ್ಥರನ್ನು ರಕ್ಷಿಸಿದ ಆರೋಪ ಹೊರಿಸಲಾಗಿದೆ ಮತ್ತು ಇಬ್ಬರು ವೈದ್ಯರು ಸಾಕ್ಷ್ಯವನ್ನು ತಿದ್ದಿದ ಆರೋಪ ಹೊರಿಸಲಾಗಿತ್ತು.
|