ಪ್ರಖ್ಯಾತ ಗುರುವಾಯೂರು ಶ್ರೀಕೃಷ್ಣ ಮಂದಿರದೊಳಗೆ ಬ್ರಿಟನ್ ಪ್ರಜೆಯೊಬ್ಬರು ಪ್ರವೇಶಿಸಿದ ಬಳಿಕ ಮಂದಿರದ ಶುದ್ಧೀಕರಣ ಕ್ರಿಯೆಯನ್ನು ಕೈಗೊಳ್ಳಲಾಯಿತು. ತಾವು ಹಿಂದು ಧರ್ಮಕ್ಕೆ ಮತಾಂತರ ಹೊಂದಿರುವುದಾಗಿ ಬ್ರಿಟನ್ ಪ್ರಜೆ ಹೇಳಿದರೂ ಕೂಡ ಈ ಶುದ್ಧೀಕರಣವನ್ನು ಕೈಗೊಳ್ಳಲಾಯಿತು. ಹಿಂದುಯೇತರರಿಗೆ ನಿಷೇಧವಿರುವ ಈ ದೇವಸ್ಥಾನದೊಳಗೆ ಬ್ರಿಟನ್ನಿನ ಪ್ರಜೆ ಪೂಜೆ ಮಾಡಿರುವ ವಿಷಯ ತಿಳಿದ ಬಳಿಕ ಭಾನುವಾರ ದೇವಸ್ಥಾನದ ತಂತ್ರಿಯು "ಪುಣ್ಯಹಂ"ಗೆ ಆದೇಶ ನೀಡಿದರು.
ತಾವು ಹಿಂದುಧರ್ಮಕ್ಕೆ ಮತಾಂತರಗೊಂಡು ಪ್ರಾಣವಾಹಿ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿರುವುದಾಗಿ ವಿದೇಶಿ ಪ್ರಜೆ ಹೇಳಿದ್ದರೂ ದೇವಸ್ಥಾನದ ಶುದ್ಧೀಕರಣ ಕ್ರಿಯೆ ಕೈಗೊಳ್ಳುವಂತೆ ಅರ್ಚಕರು ಆದೇಶಿಸಿದರು ಎಂದು ಮೂಲಗಳು ಹೇಳಿವೆ.
ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ವಿದೇಶಿ ಪ್ರಜೆ ಆರ್ಯಸಮಾಜದ ತಿರುವನಂತಪುರ ಶಾಖೆ ನೀಡಿದ ಪ್ರಮಾಣಪತ್ರವನ್ನು ತೋರಿಸಿದರೂ ಆರ್ಯಸಮಾಜದ ಕಲ್ಲಿಕೋಟೆ ಶಾಖೆ ನೀಡುವ ಪ್ರಮಾಣಪತ್ರ ಮಾತ್ರ ಸ್ವೀಕರಿಸುವುದಾಗಿ ಅರ್ಚಕರು ಹೇಳಿದ್ದಾರೆ. ಕೇರಳದ ಪ್ರಮುಖ ದೇವಾಲಯಗಳಿಗೆ ಹಿಂದುಯೇತರರಿಗೆ ಪ್ರವೇಶಾವಕಾಶ ನೀಡದಿರುವುದರಿಂದ ವಿವಾದದ ಕಿಡಿ ಸ್ಫೋಟಿಸಿದೆ.
ಎರಡು ದಿನಗಳ ಕೆಳಗೆ ಕೇರಳದ ಕಡಂಪುಳ ದೇವಿ ಮಂದಿರದಲ್ಲಿ ತಮಗೆ ಪ್ರವೇಶ ನೀಡದೇ ಅವಮಾನ ಮಾಡಲಾಯಿತೆಂದು ಖ್ಯಾತ ಹಿನ್ನೆಲೆ ಗಾಯಕ ಕೆ.ಜಿ. ಯೇಸುದಾಸ್ ಆರೋಪಿಸಿದ್ದರು.
|