ನೂತನ ಜಾಗತಿಕ ವ್ಯವಸ್ಥೆಯಲ್ಲಿ ವಿಶ್ವಸಂಸ್ಥೆ ಹೆಚ್ಚು ಪ್ರತಿನಿಧಿಗಳನ್ನು ಹೊಂದಬೇಕು ಎಂದು ಹೇಳುವ ಮೂಲಕ,ಬ್ರಿಟಿಶ್ ಪ್ರಧಾನಿ ಗೋರ್ಡನ್ ಬ್ರೌನ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯುವ ಭಾರತದ ಪ್ರಯತ್ನಕ್ಕೆ ಬೆಂಬಲ ನೀಡಿದ್ದಾರೆ.
ತನ್ನ ಭಾರತ ಭೇಟಿಯ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬ್ರೌನ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಸ್ಥಾನ ಪಡೆಯುವುದನ್ನು ಹಾಗೂ ಭವಿಷ್ಯಕ್ಕಾಗಿ ರಕ್ಷಣಾ ಮಂಡಳಿಯ ಸುಧಾರಣೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ ಎಂದರು.
ಆಧುನಿಕ ಯುಗಕ್ಕೆ ಅನುಗುಣವಾಗಿ ಅಂತರಾಷ್ಟ್ರೀಯ ಸಂಸ್ಥೆಗಳು ಸುಧಾರಣೆಗೊಳ್ಳಬೇಕು ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ. 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕು ಮತ್ತು ನೂತನ ಜಾಗತಿಕ ವ್ಯವಸ್ಥೆಯಲ್ಲಿ ಹೆಚ್ಚು ಪ್ರತಿನಿಧಿಗಳಿರಬೇಕು ಎಂದು ಬ್ರೌನ್ ನುಡಿದರು.
ಜಾಗತಿಕ ಸಂಸ್ಥೆಗಳ ಸುಧಾರಣೆಯ ವೇಳೆ ಉಂಟಾಗುವ ಕಷ್ಟಪರಿಸ್ಥಿತಿಯನ್ನು ನಾನು ಕೀಳಾಗಿ ಪರಿಗಣಿಸಿಲ್ಲ ಎಂದು ಸ್ಪಷ್ಟಪಡಿಸಿದ ಪ್ರಧಾನಿ ಸಿಂಗ್, ಅಂತರಾಷ್ಟ್ರೀಯ ಸಂಸ್ಥೆಗಳು ವಿಶ್ವದ ಪ್ರತಿನಿಧಿಗಳಾಗಬೇಕು ಎಂದು ಹೇಳಿದರು.
|