ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಗೌಪ್ಯ ಮಾಹಿತಿಯನ್ನು ಇತರರಿಗೆ ರವಾನಿಸುತ್ತಿದ್ದ ಸೇನಾ ಸಿಬ್ಬಂದಿಯೊಬ್ಬನನ್ನು ಗ್ವಾಲಿಯರ್‌ನಲ್ಲಿ ಮಿಲಿಟರಿ ಗುಪ್ತ ದಳವು ವಶಕ್ಕೆ ತೆಗೆದುಕೊಂಡಿದೆ.
ಈತ ಇತ್ತೀಚೆಗೆ ಬಂಧಿತನಾಗಿದ್ದ ಐಎಸ್ಐ ಏಜೆಂಟ್ ಇಮ್ರಾನ್ ಖುರೇಶಿಗೆ ಮಾಹಿತಿ ನೀಡುತ್ತಿದ್ದ ಎಂದು ಹೇಳಲಾಗಿದೆ. ಖುರೇಶಿಯು ಬೆಂಗಳೂರಿನಲ್ಲಿಯೂ ವಾಸವಾಗಿದ್ದ ಎಂಬ ಅಂಶ ತನಿಖೆ ವೇಳೆ ಬಯಲಾಗಿದೆ.
ಮಹಾರ್ ರೆಜಿಮೆಂಟ್‌ನ ಮುಖ್ಯಾಲಯವು ಮಧ್ಯಪ್ರದೇಶದ ಸಾಗರ್‌ನಲ್ಲಿದೆ. ಬಂಧಿತನನ್ನು ನೀರಜ್ ಶರ್ಮಾ ಎಂದು ಗುರುತಿಸಲಾಗಿದೆ.
ಭೋಪಾಲದಲ್ಲಿ ಜನವರಿ 19ರಂದು ಪಾಕಿಸ್ತಾನದ ಐಎಸ್ಐ ಏಜೆಂಟ್ ಇಮ್ರಾನ್ ಖುರೇಶಿ (34) ಎಂಬಾತನನ್ನು ಬಂಧಿಸಲಾಗಿತ್ತು. ಈತ ಭಾರತೀಯ ಸೇನೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನ ಮತ್ತಿತರ ರಾಷ್ಟ್ರಗಳಿಗೆ ಕಳುಹಿಸುತ್ತಿದ್ದ. ಆತನ ಇಬ್ಬರು ಸಹಚರರನ್ನೂ ಬಂಧಿಸಲಾಗಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕರಾಚಿಯವನಾಗಿರುವ ಖುರೇಶಿ ಕಳೆದ ನಾಲ್ಕು ವರ್ಷಗಳಿಂದ ಭಾರತದಲ್ಲಿದ್ದು ಬೆಂಗಳೂರು, ಕೋಲ್ಕತಾ, ಮುಂಬಯಿ ಮತ್ತು ಲಖ್ನೋಗಳಲ್ಲಿ ವಾಸಿಸಿದ್ದ. ಮೂರುವರೆ ತಿಂಗಳಿಂದ ಈತ ಭೋಪಾಲದಲ್ಲಿದ್ದುಕೊಂಡು, ಸೇನೆಯ ಕುರಿತ ಮಾಹಿತಿ ಸಂಗ್ರಹಿಸುತ್ತಿದ್ದ. 1995ರಲ್ಲಿ ಐಎಸ್ಐ ಜತೆ ಸಂಪರ್ಕಕ್ಕೆ ಬಂದಿದ್ದ ಖುರೇಶಿಯ ವಿಚಾರಣೆ ವೇಳೆ ದೊರೆತ ಮಾಹಿತಿಯ ಆಧಾರದಲ್ಲಿ ಆತನ ಸಹಚರರಾದ ಇಕ್ಬಾಲ್ ಮತ್ತು ಅಖ್ತರ್ ಎಂಬವರೂ ಸೆರೆಯಾಗಿದ್ದಾರೆ.
ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್), ರೇಶನ್ ಕಾರ್ಡ್ ಮತ್ತಿತರ ಪಾಸ್‌ಪೋರ್ಟ್‌ಗೆ ಪೂರಕವಾದ ದಾಖಲೆಗಳನ್ನು ಪಡೆಯಲು ಖುರೇಶಿಗೆ ಸಹಾಯ ಮಾಡಿದ್ದು ಇಕ್ಬಾಲ್. 2003ರಲ್ಲಿ ದೆಹಲಿ ಪ್ರವೇಶಿಸಿದ್ದ ಖುರೇಶಿ, ಕೋಲ್ಕತಾ, ಢಾಕಾಗೆ ತೆರಳಿ ಅಲ್ಲಿ ಮದುವೆಯೂ ಆಗಿದ್ದ. ಆತನಿಗೆ ಹಣಕಾಸು ನೆರವು ದುಬೈನಿಂದ ಬರುತ್ತಿತ್ತು. ಆಟೋ ಚಾಲಕ ಅಖ್ತರ್ ಎಂಬಾತನೂ ಸೆರೆಯಾದಾಗ, ಒಂದು ಕೋಮಿನವರು ಮೋತಿನಗರ ಪೊಲೀಸ್ ಠಾಣೆಗೆ ಘೇರಾವ್ ಹಾಕಿ, ಘೋಷಣೆ ಕೂಗಿದರು. ಪೊಲೀಸರು ಕಷ್ಟಪಟ್ಟು ಪರಿಸ್ಥಿತಿ ನಿಯಂತ್ರಿಸಿದರು.
ಐಎಸ್ಐಗಾಗಿ ಕೆಲಸ ಮಾಡುತ್ತಿರುವುದಾಗಿ ಖುರೇಶಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
|