ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಬಿಎಸ್‌ಪಿ ವರಿಷ್ಠೆ ಮಾಯಾವತಿ ರಾಷ್ಟ್ರದ ಇತರೆ ನಾಯಕಿಯರಿಗಿಂತ ತಮ್ಮ ಶ್ರೇಷ್ಠತೆಯನ್ನು ಹೇಳಿಕೊಂಡಿದ್ದು, ಕೆಲವರಿಗೆ ರಾಜಕೀಯ ಅಧಿಕಾರವು ವಂಶಪಾರಂಪರ್ಯವಾಗಿ ಬಂದಿದ್ದರೆ ತಾವು ಸಾಮಾಜಿಕ ಪರಿವರ್ತನೆಗೆ ಹೋರಾಡುವ ಮೂಲಕ ಅಧಿಕಾರವನ್ನು ಪಡೆದಿದ್ದಾಗಿ ನುಡಿದರು.
ತಮ್ಮ 52ನೇ ಹುಟ್ಟುಹಬ್ಬದ ಅಂಗವಾಗಿ ಕಳೆದ ವಾರ ಬಿಡುಗಡೆ ಮಾಡಿದ ಅವರ ಆತ್ಮಚರಿತ್ರೆ ಪುಸ್ತಕದಲ್ಲಿ ಸಮಾಜದ ದಮನಿತ ವರ್ಗಕ್ಕೆ ಸಮಾನತೆ ಮತ್ತು ಗೌರವ ಖಾತರಿಗೆ ಸಾಮಾಜಿಕ ಬದಲಾವಣೆ ತರುವ ಬೃಹತ್ ಕಾರ್ಯವನ್ನು ಹೆಗಲ ಮೇಲೆ ಹೊರುವ ಮೂಲಕ ಸಣ್ಣ ವಯಸ್ಸಿನಲ್ಲೇ ಅಪರೂಪದ ಆದರ್ಶವನ್ನು ಹಾಕಿಕೊಟ್ಟಿದ್ದಾಗಿ ಅವರು ಹೇಳಿದ್ದಾರೆ.
"ಜೀವನದ ಹೋರಾಟ ಮತ್ತು ಬಿಎಸ್‌ಪಿ ಆಂದೋಳನ" ಎಂಬ ತಮ್ಮ ಪುಸ್ತಕದ ಆರಂಭದ ಅಧ್ಯಾಯದಲ್ಲಿ 21ನೇ ಶತಮಾನದಲ್ಲಿ ಮಾಯಾವತಿ ವಿದ್ಯಮಾನದ ಮಹತ್ವ ಮತ್ತು ಅವರ ದಮನಕ್ಕೆ ರಾಜಕೀಯ ಶಕ್ತಿಗಳ ಹುನ್ನಾರವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ವಂಶಪಾರಂಪರ್ಯ ಅಧಿಕಾರದ ಮೂಲಕ ಸರ್ಕಾರ ನಡೆಸುವ ಮಹಿಳೆಗಿಂತ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯ ಮಹಾನ್ ಗುರಿ ಇಟ್ಟುಕೊಂಡು ದರ್ಮಯುದ್ಧ ಮಾಡುವ ಮಹಿಳೆ ಭಿನ್ನವಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.
ವಿದೇಶಿ ಸುದ್ದಿಪತ್ರಿಕೆ ನ್ಯೂಸ್‌ವೀಕ್‌ನಲ್ಲಿ ತಮ್ಮ ಮೌಲ್ಯವನ್ನು ಗುರುತಿಸಿ ವಿಶ್ವದಲ್ಲೇ 8 ಬಲಾಢ್ಯ ಮಹಿಳೆಯರ ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ಅವರು ಕೃತಜ್ಞತೆ ಅರ್ಪಿಸಿದರು. ವಾಸ್ತವ ಪರಿಸ್ಥಿತಿಯ ಬಗ್ಗೆ ತನ್ನ ಕಣ್ಣುಮುಚ್ಚಿಕೊಂಡಿರುವ ಜನರಿದ್ದು, ಅವರು ಕಾಲಬದಲಾದಂತೆ ಅಭಿಪ್ರಾಯ ಬದಲಿಸುವುದಿಲ್ಲ. ತಾವು ದಲಿತ ಆಂದೋಳನದದಲ್ಲಿ ವಹಿಸಿದ ಪಾತ್ರ ಮತ್ತು ಆ ಪ್ರಕ್ರಿಯೆಯಲ್ಲಿ ಮಾಡಿದ ತ್ಯಾಗವನ್ನು ವಿದೇಶಿ ಸುದ್ದಿ ನಿಯತಕಾಲಿಕ ಗುರುತಿಸುವ ತನಕ ಕಡೆಗಣಿಸಲಾಯಿತು ಎಂದು ಅವರು ನುಡಿದಿದ್ದಾರೆ.
|