ಫ್ರೆಂಚ್ ಅಧ್ಯಕ್ಷ ನಿಕೋಲಾಸ್ ಸಾರ್ಕೊಜಿ ಇಲ್ಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರಿಗೆ ಪ್ರತಿಷ್ಠಿತ ಸೈಮನ್ ಡೆ ಬಿವೋರ್ ಪ್ರಶಸ್ತಿ ನೀಡುವ ಪ್ರಸ್ತಾಪಕ್ಕೆ ಸರ್ಕಾರ ಸೌಜನ್ಯದಿಂದಲೇ ಬೇಡವೆಂದು ತಿಳಿಸಿದೆ. ಕೋಪೋದ್ರಿಕ್ತ ಮುಸ್ಲಿಮರು ಇನ್ನೊಂದು ಬಾರಿ ಪ್ರತಿಭಟನೆ ನಡೆಸುವರೆಂಬ ಶಂಕೆಯಿಂದ ಸರ್ಕಾರ ಈ ನಿರ್ಧಾರ ತಳೆದಿದೆ.
ತಸ್ಲೀಮಾಗೆ ಪ್ರಶಸ್ತಿ ನೀಡುವುದರಿಂದ ಬೀದಿಪ್ರತಿಭಟನೆಗಳು ಮತ್ತೆ ಭುಗಿಲೇಳುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ತಸ್ಲೀಮಾಗೆ ಪ್ರಶಸ್ತಿ ನೀಡುವ ಸಮಾರಂಭವನ್ನು ಏರ್ಪಡಿಸದಿರುವುದೇ ಉತ್ತಮ ಎಂದು ಭಾರತ ಸರ್ಕಾರ ಫ್ರೆಂಚ್ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಮಹಿಳೆಯರ ಹಕ್ಕುಗಳನ್ನು ಸಮರ್ಥಿಸಿಕೊಂಡ ತಸ್ಲೀಮಾ ಅವರಿಗೆ ಜ.9ರಂದು ಫ್ರೆಂಚ್ ಸರ್ಕಾರ ಸೈಮನ್ ಡಿ ಬೆವೋರ್ ಪ್ರಶಸ್ತಿಯನ್ನು ಪ್ರಕಟಿಸಿತ್ತು. ಸಾಮಾಜಿಕ ಸಂಪ್ರದಾಯಗಳು ಮತ್ತು ಅನಿಷ್ಠಗಳ ವಿರುದ್ಧ ಕ್ರಾಂತಿಕಾರಿ ಧೋರಣೆ ಹೊಂದಿದ್ದ ದಂತಕತೆಯಾದ ಮಹಿಳಾ ಲೇಖಕಿಯ ಸ್ಮರಣಾರ್ಥ ಸ್ಥಾಪಿಸಿದ ಪ್ರಶಸ್ತಿಯನ್ನು ತಮಗೆ ನೀಡುವ ಮೂಲಕ ಗೌರವಿಸಲಾಗಿದೆ ಎಂದು ಅಜ್ಞಾತ ಸ್ಥಳದಲ್ಲಿರುವ ತಸ್ಲೀಮಾ ಹೇಳಿದ್ದರು. ಬೆವೋರ್ ಜನ್ಮಶತಮಾನೋತ್ಸವದಲ್ಲಿ ಈ ಪ್ರಶಸ್ತಿಯನ್ನು ನೀಡಿದ್ದರಿಂದ ಈ ಪ್ರಶಸ್ತಿ ಮಹತ್ವ ಗಳಿಸಿದೆ ಎಂದು ಅವರು ತಿಳಿಸಿದ್ದರು.
ಚುನಾವಣೆಯ ಸುದೀರ್ಘ ಸರಣಿಗಳ ಮುಂದೆ ತಸ್ಲೀಮಾ ಲೇಖನದ ಬಗ್ಗೆ ಇನ್ನೊಮ್ಮೆ ವಿವಾದ ಭುಗಿಲೇಳುವುದನ್ನು ತಪ್ಪಿಸಲು ಉದ್ದೇಶಿಸಿರುವ ಸರ್ಕಾರ, ಫ್ರೆಂಚ್ ಸರ್ಕಾರ ತಸ್ಲೀಮಾ ಅವರಿಗೆ ಬೇರೆಸ್ಥಳದಲ್ಲಿ ಗೌರವಿಸಲು ಇಚ್ಛಿಸುವುದಾದರೆ ಅವರ ಪ್ರಯಾಣಕ್ಕೆ ವ್ಯವಸ್ಥೆ ಮಾಡುವುದಾಗಿ ಭಾರತ ತಿಳಿಸಿದೆ.
|