ರಾಜ್ಯದಲ್ಲಿ ಹರಿಯುವ ನದಿಗಳ ಜೋಡಣೆಗೆ ತಮಿಳುನಾಡು ಸರ್ಕಾರ ಆರಂಭಿಕ ಕೆಲಸಗಳನ್ನು ಕೈಗೊಳ್ಳಲಿದೆ ಎಂದು ರಾಜ್ಯವಿಧಾನಸಭೆಗೆ ಬುಧವಾರ ಮಾಹಿತಿ ನೀಡಲಾಯಿತು. ಬುಧವಾರ ಬೆಳಿಗ್ಗೆ ಅಧಿವೇಶನ ಆರಂಭವಾದ ವಿಧಾನಸಭೆಯಲ್ಲಿ ಸಾಂಪ್ರದಾಯಿಕ ಭಾಷಣ ಮಾಡಿದ ರಾಜ್ಯಪಾಲ ಎಸ್.ಎಸ್. ಬರ್ನಾಲಾ ಅಂತಾರಾಜ್ಯ ನದಿಗಳ ಜೋಡಣೆಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳುವಂತೆ ರಾಜ್ಯವು ಕೇಂದ್ರಕ್ಕೆ ಪುನಃ ಪುನಃ ಒತ್ತಾಯಿಸಿದರೂ ರಾಜ್ಯಗಳ ನಡುವೆ ಒಮ್ಮತ ಏರ್ಪಡಲಿಲ್ಲ.
ಈ ಕಾರಣದಿಂದಾಗಿ 11ನೇ ಯೋಜನಾವಧಿಯಲ್ಲಿ ರಾಜ್ಯದ ನದಿಗಳ ಜೋಡಣೆಗಾದರೂ ಆರ್ಥಿಕ ನೆರವು ನೀಡುವಂತೆ ತಮಿಳುನಾಡು ಕೇಂದ್ರಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಇನ್ನು ಹೆಚ್ಚು ಸಮಯ ವ್ಯರ್ಥ ಮಾಡದೇ ಈ ಸರ್ಕಾರ ನದಿ ಜೋಡಣೆ ಯೋಜನೆಯ ಆರಂಭಿಕ ಕೆಲಸ ಕೈಗೆತ್ತಿಕೊಳ್ಳಲಿದೆ ಎಂದು ಅವರು ನುಡಿದರು.
ಮುಂಗಾರು ಋತುವಿನ ಸಂದರ್ಭದಲ್ಲಿ ಹೆಚ್ಚುವರಿ ನೀರು ಸಮುದ್ರಕ್ಕೆ ಹರಿದುಹೋಗುವುದನ್ನು ತಪ್ಪಿಸುವ ಸಾಧ್ಯತೆಯನ್ನು ಶೋಧಿಸಲು ತಜ್ಞರ ಸಮಿತಿಯನ್ನು ಸರ್ಕಾರ ಸ್ಥಾಪಿಸುವುದೆಂದು ರಾಜ್ಯಪಾಲರು ತಿಳಿಸಿದರು.
ಈ ವರ್ಷ ಬರಗಾಲ ಪೀಡಿತ ಪ್ರದೇಶಗಳಲ್ಲಿ ನದಿಗಳು ಮತ್ತು ತೊರೆಗಳ ಬಳಸಲಾಗದ ನೀರನ್ನು ಸಂಗ್ರಹಿಸಲು ಚೆಕ್ ಡ್ಯಾಮ್ ನಿರ್ಮಾಣ ಮಾಡುವ ಪ್ರಮುಖ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದೆಂದು ಅವರು ನುಡಿದರು.
|