ವಿವಾದಾತ್ಮಕ ಬಾರಕ್ ಕ್ಷಿಪಣಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಳಪೆ ತನಿಖೆ ಕೈಗೊಂಡಿದ್ದಾಗಿ ಸುಪ್ರೀಂಕೋರ್ಟ್ ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಸಹ ಆರೋಪಿ ಎಂದು ಹೆಸರಿಸಲಾಗಿದ್ದರೂ ಅವರನ್ನು ಏಕೆ ಪ್ರಶ್ನಿಸಲಿಲ್ಲ ಎಂದು ಕೋರ್ಟ್ ಸಿಬಿಐಯನ್ನು ಕೇಳಿದೆ.
1150 ಕೋಟಿ ರೂ. ಮೌಲ್ಯದ ಬಾರಕ್ ಕ್ಷಿಪಣಿ ಒಪ್ಪಂದದಲ್ಲಿ ರುಷುವತ್ತುಗಳಿಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಮಾರಾಟಗಾರ ಸುರೇಶ್ ನಂದಾ ವಿರುದ್ಧ ಯಾವುದೇ ಕೇಸು ದಾಖಲಾಗದಿದ್ದರೂ ವಿದೇಶಕ್ಕೆ ತೆರಳಲು ಅವಕಾಶ ನೀಡದಿರುವ ಬಗ್ಗೆ ತನಿಖಾ ದಳವನ್ನು ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಕೆಲವೇ ದಿನಗಳಲ್ಲಿ ಸಿಬಿಐಗೆ ಈ ಹಿನ್ನಡೆ ಉಂಟಾಗಿದೆ.
ಅವರ ವಿರುದ್ಧ ಅಪರಾಧಗಳು ಗಂಭೀರವಾಗಿರಬಹುದು. ಆದರೆ ಅವರ ಪಾಸ್‌ಪೋರ್ಟ್‌ನ್ನು ಯಾವುದೇ ಕಾರಣವಿಲ್ಲದೇ ತಡೆಹಿಡಿಯುವಂತಿಲ್ಲ. ಆದರೆ ಇನ್ನೂ ಬಂಧಿತರಾಗದ ವ್ಯಕ್ತಿಯ ಪಾಸ್‌ಪೋರ್ಟನ್ನು ಯಾವ ನಿಯಮದ ಮೇಲೆ ತಡೆಹಿಡಿಯಲಾಯಿತು ಎಂದು ನ್ಯಾಯಮೂರ್ತಿಗಳಾದ ಪಿ.ಪಿ. ನಾವ್ಲೇಕರ್ ಮತ್ತು ಎಲ್.ಎಸ್. ಪಂತಾ ಕೇಳಿದ್ದಾರೆ.
ನಂದಾ ವಿದೇಶದಿಂದ 400 ಕೋಟಿ ರೂ.ಗಳನ್ನು ಸ್ವೀಕರಿಸಿದ್ದು, ಈ ಒಪ್ಪಂದದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ತನಿಖಾ ದಳ ಆರೋಪಿಸಿದೆ. ಎನ್‌ಡಿಎ ಆಡಳಿತಾವಧಿಯಲ್ಲಿ ಈ ಹಗರಣ ಬೆಳಕಿಗೆ ಬಂದಿದ್ದು, ಇಸ್ರೇಲಿ ನಿರ್ಮಿತ ಬಾರಕ್ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಇದು ಸಂಬಂಧಿಸಿದೆ.
|