ಮಹಿಳಾ ದಳದ ಸಹಿತ 38 ಮಂದಿ ಉಲ್ಫಾ ಉಗ್ರಗಾಮಿಗಳು ಅಸ್ಸಾಂ ಬಾಕ್ಸಾ ಜಿಲ್ಲೆಯಲ್ಲಿ ಸೇನೆಯ ಎದುರು ಗುರುವಾರ ಶರಣಾದರು. ನಾಯನ್ ಕಾಕೋಟಿ ನೇತೃತ್ವದ ಉಗ್ರರು ರೆಡ್ ಹಾರ್ನ್ ವಿಭಾಗದ ಮೌಂಟನ್ ಬ್ರಿಗೇಡ್ ಮುಖ್ಯಕೇಂದ್ರದಲ್ಲಿ ಲೆ.ಜ. ಬಿ.ಎಸ್.ಜಮ್ವಾಲ್‌ಗೆ ಶರಣಾದರು. ಶರಣಾಗತರಾದ ಉಗ್ರಗಾಮಿಗಳು 28 ಪಿಸ್ತೂಲುಗಳು, 18 ಗ್ರೆನೇಡುಗಳು., 22 ಮದ್ದುಗುಂಡುಗಳು ಮತ್ತು 30 ಕೇಜಿ ಸ್ಫೋಟಕಗಳು ಮತ್ತು 150 ಸುತ್ತು ಎಕೆ-47 ಜೀವಂತ ಗುಂಡುಗಳನ್ನು ಒಪ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೆ.ಜ. ಜಮ್ವಾಲ್ ಭಯೋತ್ಪಾದಕತೆಯಿಂದ ಯಾವುದೇ ಪರಿಹಾರ ಸಿಗದಿರುವುದರಿಂದ ಸೇನೆಯು ದಾರಿತಪ್ಪಿದ ಯುವಕರನ್ನು ಮುಖ್ಯವಾಹಿನಿಗೆ ತರಲು ಯತ್ನಿಸುತ್ತಿದೆ ಎಂದು ನುಡಿದರು. ಇನ್ನೂ ಕೆಲವು ಉನ್ನತ ಉಗ್ರಗಾಮಿಗಳು ಶರಣಾಗತಿಗೆ ಆಸಕ್ತರಾಗಿದ್ದಾರೆ ಎಂದು ಅವರು ನುಡಿದರು.
ಈ ಕ್ರಮದಿಂದ ಉಳಿದ ಉಗ್ರರು ಮುಖ್ಯವಾಹಿನಿಗೆ ಸೇರಲು ನೆರವಾಗುತ್ತದೆ ಎಂದು ಅಸ್ಸಾಂ ಪ್ರಧಾನ ಪೊಲೀಸ್ ನಿರ್ದೇಶಕ ಆರ್. ಎನ್. ಮಾಥುರ್ ತಿಳಿಸಿದರು.
|