ಅನೇಕ ಮಂದಿಯ ಜೀವವುಳಿಸುವ ಮೂಲಕ ಅಪ್ರತಿಮ ಶೌರ್ಯ ಮೆರೆದ 22 ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗಳನ್ನು ನೀಡಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ಗುರುವಾರ ಸನ್ಮಾನಿಸಿದರು. ಇಂತಹ ಮಕ್ಕಳು ರಾಷ್ಟ್ರದ ಬೆನ್ನೆಲುಬು ಎಂದು ಬಣ್ಣಿಸಿದ ಪ್ರಧಾನಿ, ಇಂದು ಪ್ರಶಸ್ತಿ ಪಡೆದ ಮಕ್ಕಳು ಭವಿಷ್ಯದ ಜೀವನದಲ್ಲಿ ಅತ್ಯುಚ್ಛ ಮಟ್ಟಕ್ಕೆ ಏರುತ್ತಾರೆಂದು ಆಶಾವಾದ ವ್ಯಕ್ತಪಡಿಸಿದರು.
ಅಪಹರಣಕಾರರಿಂದ ಸ್ವತಃ ಪಾರಾಗುವ ಭರದಲ್ಲಿ ಕೈಯೊಂದನ್ನು ಕಳೆದುಕೊಂಡ ಉತ್ತರಪ್ರದೇಶದ ಬಾಲಕ ಅಂಕಿತ್ ರಾಯ್ ಶೌರ್ಯದ ಬಗ್ಗೆ ಪ್ರಧಾನಿ ವಿಶೇಷವಾಗಿ ಶ್ಲಾಘಿಸಿದರು. ಬಾಲ್ಯದಲ್ಲೇ ತನಗೆ ವಿವಾಹಮಾಡಲು ಬಯಸಿದ ಪೋಷಕರ ಧೋರಣೆಯನ್ನು ಪ್ರತಿಭಟಿಸಿ ಪೊಲೀಸರಿಗೆ ದೂರು ನೀಡಿದ ಕನ್ವರ್ ಎದೆಗಾರಿಕೆಯನ್ನು ಪ್ರಧಾನಿ ಹೊಗಳಿ ಬಾಲಕಿಯರಿಗೆ ಶಿಕ್ಷಣ ನೀಡುವುದು ಪ್ರತಿಯೊಂದು ಕುಟುಂಬದ ಕರ್ತವ್ಯ ಎಂದು ನುಡಿದರು.
ಶೌರ್ಯ ಪ್ರಶಸ್ತಿ ಪಡೆದ 22 ಮಕ್ಕಳಲ್ಲಿ ನಾಲ್ವರು ಬಾಲಕಿಯರು ಮತ್ತು 18 ಮಂದಿ ಬಾಲಕರು. ನಾಲ್ವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಯಿತು. ಪ್ರತಿಷ್ಠಿತ ಭಾರತ್ ಪ್ರಶಸ್ತಿಯು ಹರ್ಯಾಣದಲ್ಲಿ ನೀರಿನಲ್ಲಿ ಮುಳುಗುತ್ತಿದ್ದವರ ಜೀವವುಳಿಸಿದ ಬಬಿತಾ(17) ಮತ್ತು ಅಮರಜೀತ್(15) ಅವರಿಗೆ ಸಂದಿದೆ. ಪ್ರತಿಷ್ಠಿತ ಗೀತಾ ಛೋಪ್ರಾ ಪ್ರಶಸ್ತಿಯು ಮಿಜೋರಾಂನ ಲಾಲ್‌ರೆಂಪುರಿ ಅವರಿಗೆ ಮರಣೋತ್ತರವಾಗಿ ಸಿಕ್ಕಿದೆ.
ಅತ್ಯಾಚಾರಕ್ಕೆ ಯತ್ನಿಸಿದ ದುಷ್ಕರ್ಮಿಯ ವಿರುದ್ಧ ಹೋರಾಟ ನಡೆಸಿದ ಆಕೆ ಪ್ರಾಣವನ್ನೇ ತೆತ್ತಿದ್ದಳು. ಪ್ರಶಸ್ತಿವಿಜೇತರು ಅಲಂಕೃತ ಆನೆಯ ಮೇಲೆ ಕುಳಿತುಕೊಂಡು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
|