ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಹರ್ಕತ್ ಉಲ್ ಜೆಹಾದ್ ಅಲ್ ಅಸ್ಲಾಮಿ(ಹೂಜಿ) ನಾಯಕ ಮತ್ತು ಉತ್ತರಪ್ರದೇಶ ಸ್ಫೋಟದ ಸೂತ್ರಧಾರ ಬಶೀರ್ ಅಹ್ಮದ್ ಅಲಿಯಾಸ್ ಸಬಾ ಅವರನ್ನು ಕಿಸ್ಟಾವರ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕೊಂದಿದ್ದಾರೆ. ಸುಮಾರು ಒಂದು ತಿಂಗಳಿಂದ ಜಮ್ಮು ಕಾಶ್ಮೀರ ಪೊಲೀಸರು ಹುಡುಕಾಡುತ್ತಿದ್ದ ಹೂಜಿ ಮುಖ್ಯಸ್ಥನನ್ನು ಕಿಸ್ಟಾವರ್ ಜಿಲ್ಲೆಯ ಕಾಟ್ರು ಗ್ರಾಮದಲ್ಲಿ ರಾಜ್ಯ ಪೊಲೀಸರ ಕಮಾಂಡೊಗಳು ಮುತ್ತಿಗೆ ಹಾಕಿ ಕೊಂದಿದ್ದಾರೆಂದು ಅಧಿಕೃತ ಮೂಲಗಳು ಹೇಳಿವೆ.
ಉತ್ತರಪ್ರದೇಶದಲ್ಲಿ ಕಳೆದ ನವೆಂಬರ್‌ನಲ್ಲಿ ಸಂಭವಿಸಿದ ಮೂರು ಸರಣಿ ಸ್ಫೋಟಗಳಲ್ಲಿ ಬಂಧಿತರಾದ ಉಗ್ರಗಾಮಿಗಳ ತನಿಖೆಯ ಸಂದರ್ಭದಲ್ಲಿ ಅಹ್ಮದ್ ಹೆಸರು ಬೆಳಕಿಗೆ ಬಂದಿತ್ತು. ಉಗ್ರಗಾಮಿ ಬಷೀರ್ ಅಹ್ಮದ್ ಕೂಡ ಹೈದರಾಬಾದ್ ಸ್ಫೋಟಗಳ ಹಿಂದಿದ್ದಾನೆಂದು ನಂಬಲಾಗಿದೆ. ಮೆಕ್ಕಾ ಮಸೀದಿ, ಲುಂಬಿನಿ ಪಾರ್ಕ್ ಮತ್ತು ಗೋಕುಲ್ ಚಾಟ್ ಬಂಡಾರ್ ಪ್ರದೇಶದಲ್ಲಿ ಸ್ಫೋಟಿಸಿದ ಮೂರು ಬಾಂಬ್‌ಗಳಲ್ಲಿ 50ಕ್ಕೂ ಹೆಚ್ಚು ಜನರು ಸತ್ತಿದ್ದರು.
ಹತನಾದ ಉಗ್ರಗಾಮಿಯಿಂದ ಸೆಟೆಲೈಟ್ ಫೋನ್, ವೈರ್‌ಲೆಸ್ ಸೆಟ್ ಮತ್ತು ಕೆಲವು ಎಕೆ 47 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ.1992ರಲ್ಲಿ ಹರ್ಕತ್ ಉಲ್ ಅನ್ಸಾರ್‌ಗೆ ಸೇರಿದ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತರಬೇತಿ ಪಡೆದು ಆಫ್ಘಾನಿಸ್ತಾನದ ಅಲಖ್-ಎ-ಘೈರ್‌ಗೆ ತೆರಳಿದ್ದನು. ಅಲ್ಲಿ ಸ್ಫೋಟಕ ಸಾಮಗ್ರಿಗಳು, ಸಂಪರ್ಕ ವ್ಯವಸ್ಥೆ ಮತ್ತು ಅರಣ್ಯ ಸಮರಕಲೆಯಲ್ಲಿ ಅವನು ಪರಿಣತಿ ಪಡೆದಿದ್ದ.
|