ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಪ್ರಮುಖ ಕ್ರಮವಾಗಿ ಭಾರತ ಮತ್ತು ಫ್ರಾನ್ಸ್ ಶುಕ್ರವಾರ ಪರಮಾಣು ಶಕ್ತಿ ಸಹಕಾರ ಒಪ್ಪಂದಕ್ಕೆ ಸಹಿಹಾಕಿದವು. ಫ್ರೆಂಚ್ ಅಧ್ಯಕ್ಷ ನಿಕೋಲಾಸ್ ಸಾರ್ಕೋಜಿ ಅವರನ್ನು ಭೇಟಿ ಮಾಡಿದ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ಮನಮೋಹನ ಸಿಂಗ್ "ನಾವು ದ್ವಿಪಕ್ಷೀಯ ಪರಮಾಣು ಶಕ್ತಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ" ಹೇಳಿದರು.
ಭಾರತo ಪರಮಾಣು ಶಕ್ತಿ ಬಳಕೆಗೆ ಅವಕಾಶ ನೀಡಲು ಅಂತಾರಾಷ್ಟ್ರೀಯ ಒಮ್ಮತ ರೂಪಿಸಲು ಫ್ರಾನ್ಸ್ ಇಚ್ಛಿಸಿದೆ ಎಂದು ಫ್ರೆಂಚ್ ಅಧ್ಯಕ್ಷ ಸಾರ್ಕೋಜಿ ಹೇಳಿದರು. ನಾಗರಿಕ ಪರಮಾಣು ಕಾರ್ಯಕ್ರಮವನ್ನು ಮಿಲಿಟರಿಯಿಂದ ಪ್ರತ್ಯೇಕಿಸಲು ಬಯಸಿರುವುದಾಗಿ ಭಾರತ ಸ್ಪಷ್ಟಪಡಿಸಿದೆ ಎಂದು ಅವರು ನುಡಿದರು. ಭಾರತ ಅಣ್ವಸ್ತ್ರ ಪರೀಕ್ಷೆಯ ಮೇಲೆ ಸ್ವಯಂನಿಯಂತ್ರಣ ವಿಧಿಸಿದೆ ಎಂದೂ ಅವರು ಹೇಳಿದರು.
ಫ್ರಾನ್ಸ್‌ನಲ್ಲಿ ಲಕ್ಷ್ಮಿ ಮಿಟ್ಟಲ್ ಉಕ್ಕಿನ ಘಟಕದ ವಿವಾದಕ್ಕೆ ಸಂಬಂಧಿಸಿದಂತೆ ಮಿಟ್ಟಲ್ ನಮ್ಮ ಸ್ನೇಹಿತರಾಗಿದ್ದು, ನೌಕರರನ್ನು ವಜಾ ಮಾಡದೇ ಉಕ್ಕಿನ ಘಟಕವನ್ನು ಉಳಿಸಿಕೊಳ್ಳುವುದು ಹೇಗೆಂದು ಚರ್ಚಿಸಲು ಮಿಟ್ಟಲ್ ಅವರಿಗೆ ಕರೆಕಳುಹಿಸಲಾಯಿತು ಎಂದು ಅವರು ಹೇಳಿದರು. ಭೇಟಿಯ ಫಲಶೃತಿಯ ಬಗ್ಗೆ ತೃಪ್ತರಾದ ಪ್ರಧಾನಮಂತ್ರಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನಕ್ಕಾಗಿ ಭಾರತಕ್ಕೆ ಬೆಂಬಲ ನೀಡಲು ಫ್ರಾನ್ಸ್ ಸಮ್ಮತಿಸಿದ್ದಾಗಿ ಹೇಳಿದರು.
|