ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುರ್ಬಲ ವರ್ಗಗಳಿಗೆ ತಲುಪದ ಅಭಿವೃದ್ಧಿ: ರಾಷ್ಟ್ರಪತಿ ವಿಷಾದ
PTI
ಪ್ರತಿಯೊಬ್ಬರ ಕಣ್ಣೀರನ್ನು ತೊಡೆದುಹಾಕುವ ಮಹಾತ್ಮ ಗಾಂಧಿ ಅವರ ಪ್ರತಿಜ್ಞೆಯನ್ನು ನೆನಪಿಸಿದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರಾಷ್ಟ್ರದ ಆರ್ಥಿಕ ಚೇತರಿಕೆಯ ಅನುಕೂಲವು ಸಮಾಜದ ದುರ್ಬಲ ವರ್ಗಗಳಿಗೆ ತಲುಪದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. 59ನೇ ಗಣರಾಜ್ಯೋತ್ಸವ ದಿನ ಶುಕ್ರವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ತಮ್ಮ ಚೊಚ್ಚಲ ಭಾಷಣದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳುವಂತೆ ಮತ್ತು ಭಯೋತ್ಪಾದನೆ ಮೂಲೋತ್ಪಾಟನೆಗೆ ಸಾಮೂಹಿಕ ಕ್ರಮ ತೆಗೆದುಕೊಳ್ಳಬೇಕೆಂದು ಕರೆನೀಡಿದರು.

ಉನ್ನತ ಪ್ರಗತಿ ದರಗಳನ್ನು ಸಾಧಿಸುವ ನಮ್ಮ ಬದ್ಧತೆಯಲ್ಲಿ ರಾಷ್ಟ್ರದ ಪ್ರತಿಯೊಬ್ಬರೂ ಅದರ ಪ್ರಯೋಜನ ಪಡೆಯುವಂತಾಗಬೇಕು ಎಂದು ಹೇಳಿದ ಅವರು ಪ್ರತಿಯೊಬ್ಬರ ಕಣ್ಣೀರನ್ನು ಒರೆಸಬೇಕೆಂಬ ಗಾಂಧಿ ಆದರ್ಶವನ್ನು ನಾವು ಪಾಲಿಸದಿದ್ದರೆ ಪ್ರತಿಜ್ಞೆಯು ಅಪೂರ್ಣವಾಗುವುದು ಎಂದು ತಿಳಿಸಿದರು. ದಮನಿತ ಮತ್ತು ದುರ್ಬಲ ವರ್ಗಗಳ ಅಗತ್ಯಗಳನ್ನು ಪೂರೈಸದಿದ್ದರೆ ನಾವು ಭವಿಷ್ಯದ ಕಡೆ ನೋಟ ಹರಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರಪತಿ ನುಡಿದರು.

ಭಾರತನಿರ್ಮಾಣ ಮತ್ತು ಗ್ರಾಮೀಣ ಆರೋಗ್ಯ ಯೋಜನೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಯೋಜನೆಗಳು ಮುಂತಾದ ಹಲವಾರು ಯೋಜನೆಗಳನ್ನು ಉಲ್ಲೇಖಿಸಿದ ಅವರು, ಅವುಗಳ ಅನುಷ್ಠಾನವು ಒಂದು ಸವಾಲಾಗಿದ್ದು, ಅದನ್ನು ಕಾಲಮಿತಿಯೊಳಗೆ ಮತ್ತು ಪಾರದರ್ಶಕ ರೀತಿಯಲ್ಲಿ ಕೈಗೆತ್ತಿಕೊಳ್ಳಬೇಕೆಂದು ತಿಳಿಸಿದರು.

ನಾಗರಿಕ ಸಮಾಜಕ್ಕೆ ಭಯೋತ್ಪಾದನೆ ಗಂಭೀರ ಬೆದರಿಕೆಯೊಡ್ಡಿದೆ ಎಂದು ಎಚ್ಚರಿಸಿದ ಅವರು ಮುಂದುವರಿದ ಭಯೋತ್ಪಾದನೆ ದಾಳಿಗಳು ಸಾಮೂಹಿಕ ಕ್ರಮದ ಅಗತ್ಯವನ್ನು ನೆನಪಿಸುತ್ತದೆ ಎಂದು ನುಡಿದರು.

ನಕ್ಸಲೀಯರ ಆಂತರಿಕ ಬೆದರಿಕೆ ಬಗ್ಗೆ ಪ್ರಸ್ತಾಪಿಸುತ್ತಾ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರದ ವಿಧಾನಗಳಿಗೆ ಸ್ಥಳವಿಲ್ಲ. ನಕ್ಸಲೀಯ ಪಿಡುಗನ್ನು ದೃಢವಾಗಿ ನಿಭಾಯಿಸಬೇಕು ಎಂದು ಅವರು ನುಡಿದರು. ಭ್ರಷ್ಟಾಚಾರದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಅವರು, ಅಭಿವೃದ್ಧಿಗೆ ಮೀಸಲಾದ ಸಂಪನ್ಮೂಲಗಳನ್ನು ಕಳೆದುಕೊಳ್ಳುವಷ್ಟು ರಾಷ್ಟ್ರ ಶಕ್ತವಾಗಿಲ್ಲ ಎಂದು ನುಡಿದರು. ಹೆಚ್ಚಿನ ಪಾರದರ್ಶಕತೆ ತರುವ ಮೂಲಕ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಕ್ರಮಗಳನ್ನು ಬಲಿಷ್ಠಗೊಳಿಸಬೇಕು ಎಂದು
ಅವರು ನುಡಿದರು.
ಮತ್ತಷ್ಟು
ಸಚಿನ್, ಆನಂದ್ ಸೇರಿ 13 ಜನರಿಗೆ ಪದ್ಮವಿಭೂಷಣ
ಪರಮಾಣು ಶಕ್ತಿ ಸಹಕಾರ ಒಪ್ಪಂದಕ್ಕೆ ಸಹಿ
ಅಕ್ರಮ ಮೂತ್ರಪಿಂಡ ಕಸಿ ಜಾಲ ಬಯಲು
ಯಾರ ಮಡಿಲಿಗೂ ಬೀಳದ ಭಾರತರತ್ನ
ಮೇಜರ್ ದಿನೇಶ್‌ಗೆ ಮರಣೋತ್ತರ ಅಶೋಕ ಚಕ್ರ
ಗುಂಡಿನ ಚಕಮಕಿ: ಬಶೀರ್ ಅಹ್ಮದ್ ಸಾವು