ಭಾರತ-ಅಮೆರಿಕ ಪರಮಾಣು ಒಪ್ಪಂದದ ವಿರೋಧಿಗಳಿಗೊಂದು ಆಘಾತಕಾರಿ ಸುದ್ದಿ. ಸರಕಾರವು ಈ ಒಪ್ಪಂದವನ್ನು ಸಂಸತ್ತಿನ ಎದುರು ಮಂಡಿಸಬೇಕಾಗಿಲ್ಲ, ಈ ಒಪ್ಪಂದಕ್ಕೆ ತನ್ನಿಚ್ಛೆಯಂತೆ ಸಹಿ ಹಾಕಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಯಾವುದೇ ಅಂತಾರಾಷ್ಟ್ರೀಯ ಒಪ್ಪಂದ ಅಥವಾ ಒಡಂಬಡಿಕೆಗೆ ಸಹಿ ಹಾಕುವ ಮುನ್ನ ಕೇಂದ್ರ ಸರಕಾರವು ಇತರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಡ್ಡಾಯ ಎಂಬ ವಿಧಿಯು ಸಂವಿಧಾನದಲ್ಲಿ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರ ನ್ಯಾಯಪೀಠವು ಅರ್ಜಿದಾರ ಎಂ.ರವಿಪ್ರಕಾಶ್‌ಗೆ ತಿಳಿಸಿದ್ದು, ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಸರಕಾರವು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸೂಚಿಸುವ ಯಾವುದೇ ವಿಧಿಯಿದ್ದರೆ ಅದನ್ನು ತೋರಿಸುವಂತೆ ಹೇಳಿದೆ.
ಇಂಥದ್ದೇ ಅರ್ಜಿಯನ್ನು ಜನವರಿ 25ರಂದು ತಿರಸ್ಕರಿಸಿದ್ದ ನ್ಯಾಯಾಲಯವು, ಯಾವುದೇ ಕಾರ್ಯನೀತಿ ವಿಷಯಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವಂತಿಲ್ಲ ಮತ್ತು ದೇಶದ ಹಿತಾಸಕ್ತಿ ಕಾಯ್ದುಕೊಳ್ಳುವಲ್ಲಿ ಸರಕಾರವು ಸಮರ್ಥವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
ಇದೀಗ ಈ ಆದೇಶವು ಅಣು ಒಪ್ಪಂದ ವಿರೋಧಿಗಳನ್ನು ಎದುಗಿಸಲು ಮನಮೋಹನ್ ಸಿಂಗ್ ಸರಕಾರಕ್ಕೆ ಅತ್ಯಂತ ದೊಡ್ಡ ಶಸ್ತ್ರವಾಗಿದೆ. ಯಾಕೆಂದರೆ, ಪರಮಾಣು ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಅದನ್ನು ಸಂಸತ್ತಿನಲ್ಲಿ ಚರ್ಚಿಸಬೇಕು ಎಂದು ಎಡಪಕ್ಷಗಳು ಮತ್ತು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಆಗ್ರಹಿಸುತ್ತಿದ್ದವು.
|