ಅಪ್ರತಿಮ ಶೌರ್ಯಕ್ಕಾಗಿ ಸೇನಾ ಪದಕ ಪುರಸ್ಕೃತರಾದ 24 ಗಂಟೆಗಳಲ್ಲಿ ಸೇನಾಧಿಕಾರಿಯೊಬ್ಬರು ಅಸ್ಸಾಂನ ತಿನ್ಸುಕಿಯ ಬಳಿ ಉಗ್ರಗಾಮಿಗಳ ಜತೆ ಗುಂಡಿನ ಚಕಮಕಿಯಲ್ಲಿ ಹತರಾದ ಘಟನೆ ಭಾನುವಾರ ನಡೆದಿದೆ. ಕಳೆದ ವರ್ಷ ಉಗ್ರಗಾಮಿಗಳ ಜತೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರನ್ನು ಕೊಂದ ಕ್ಯಾ.ಎಸ್.ಕೆ. ಚೌಧುರಿ ತೋರಿದ ವೀರತ್ವಕ್ಕಾಗಿ ಅವರಿಗೆ ಸೇನಾ ಪದಕ ನೀಡಿ ಗೌರವಿಸಲಾಗಿತ್ತು.
ಸುಳಿವೊಂದರ ಆಧಾರದ ಮೇಲೆ ಸೇನೆಯ ಗೋರ್ಖಾ ತುಕಡಿ ಹಂಕಾತಿಯ ಮೆಚಾಕಿ ಅರಣ್ಯಪ್ರದೇಶದಲ್ಲಿ ದಾಳಿ ಮಾಡಿತು. ಅನೇಕ ಹೇಯ ಅಪರಾಧಗಳಲ್ಲಿ ಭಾಗಿಯಾದ ಉಲ್ಫಾದ ಕಟ್ಟಾ ಉಗ್ರಗಾಮಿ ಜೂಂಡ್ ಭುಯಾನ್ ಸೇರಿದಂತೆ ಇತರೆ ಉಗ್ರಗಾಮಿಗಳು ಅಡಗಿರುವ ಬಗ್ಗೆ ಸೇನೆಗೆ ಸುಳಿವು ಸಿಕ್ಕಿತ್ತು.
ಸೇನಾಪಡೆ ಸಮೀಪಿಸುತ್ತಿದ್ದಂತೆ, ಉಗ್ರಗಾಮಿಗಳು ಗುಂಡು ಹಾರಿಸಿದಾಗ ಸೇನೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿ ಒಂದು ಗಂಟೆವರೆಗೆ ಗುಂಡಿನ ಚಕಮಕಿ ಮುಂದುವರಿಯಿತು. ಕಳೆದ ವರ್ಷ ಉಲ್ಫಾದ ಇಬ್ಬರು ಮುಖಂಡರನ್ನು ಕೊಂದ ಕ್ಯಾ. ಚೌಧರಿ ಉಲ್ಫಾಗಳ ಮುಖ್ಯ ಗುರಿಯಾಗಿದ್ದರು.
ಚೌಧರಿ ಅವರನ್ನು ತೀವ್ರ ಗಾಯಗಳೊಂದಿಗೆ ರೊರೋಯಿಯ ವಾಯುಪಡೆ ಆಸ್ಪತ್ರೆಗೆ ಒಯ್ಯಲಾಯಿತು. ವರದಿಗಳ ಪ್ರಕಾರ ಭುಯಾನ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ಭುಯಾನ್ ನಿಕಟ ಸಹಚರರಾದ ಚಂದನ್ ದೋಹೊತಿಯ ಅಲಿಯಾಸ್ ಗೆಟ್ಲಿ ಮತ್ತು ಟುಟು ಮೊರಾನ್ ಅವರು ಚಕಮಕಿಯಲ್ಲಿ ಹತರಾದರು.
|