ಮಹಿಳೆಯರಿಗೆ ಸಾಂಸ್ಥಿಕ ಸಂಘಟನೆಗಳಲ್ಲಿ ಮೂರನೇ ಒಂದು ಭಾಗದಷ್ಟು ಹುದ್ದೆಗಳನ್ನು ಮೀಸಲಿಡುವ ತಿದ್ದುಪಡಿಗೆ ಬಿಜೆಪಿ ಸೋಮವಾರ ಅನುಮೋದನೆ ನೀಡಿದೆ. ಕಾಂಗ್ರೆಸ್ ಬಳಿಕ ಮಹಿಳೆಯರಿಗೆ ಶೇ.ಮೂರನೇ ಒಂದರಷ್ಟುಮೀಸಲಾತಿ ಕಲ್ಪಿಸುತ್ತಿರುವ ಎರಡನೇ ಪ್ರಮುಖ ಪಕ್ಷ ಬಿಜೆಪಿಯಾಗಲಿದ್ದು, ಶಾಸಕಾಂಗಗಳಲ್ಲಿ ಮಹಿಳೆಯರ ಕೋಟಾದತ್ತ ಬಿಜೆಪಿಯ ಮೊದಲ ಜಿಗಿತ ಇದಾಗಿದೆ.
ಪಕ್ಷದ ಸಂವಿಧಾನದಲ್ಲಿ ಈ ಕುರಿತ ತಿದ್ದುಪಡಿಗೆ ಇಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಹಿರಿಯ ನಾಯಕರಾದ ಆಡ್ವಾಣಿ ಮತ್ತು ರಾಜನಾಥ್ ಸಿಂಗ್ ಅವರಿಗೆ ಪುಷ್ಪವೃಷ್ಟಿಮಾಡಿದ್ದಲ್ಲದೇ ಮಹಿಳಾ ನಾಯಕಮಣಿಗಳು ವೇದಿಕೆಗೆ ತೆರಳಿ ಅವರಿಗೆ ಮಾಲಾರ್ಪಣೆ ಮಾಡುವ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದರು.
ಇಂದಿನಿಂದ ಮೂರು ತಿಂಗಳೊಳಗೆ ಇದನ್ನು ಅನುಷ್ಠಾನಕ್ಕೆ ತರುವುದಾಗಿ ಮತ್ತು ಸಂಸದೀಯ ಮಂಡಳಿಯಲ್ಲಿ ಮಹಿಳೆಯರ ಕೋಟಾದಿಂದ ವಿನಾಯಿತಿ ನೀಡಲಾಗುವುದು ಎಂದು ಹಿರಿಯ ನಾಯಕಿ ಸುಶ್ಮಾ ಸ್ವರಾಜ್ ವರದಿಗಾರರಿಗೆ ತಿಳಿಸಿದರು. ಒಂದೊಮ್ಮೆ ಮೀಸಲಾತಿಯನ್ನು ಅನುಷ್ಠಾನಕ್ಕೆ ತಂದರೆ 81 ಸದಸ್ಯರ ರಾಷ್ಟ್ರೀಯ ಕಾರ್ಯನಿರ್ವಾಹಕದಲ್ಲಿ ಪ್ರಸಕ್ತ 13 ನಾಯಕಿಯರ ಬದಲಿಗೆ 27 ನಾಯಕಿಯರು ಇರುತ್ತಾರೆ.
|