ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ನಾಗರಿಕ ಹಕ್ಕುಗಳ ಕಾಯ್ದೆಯನ್ನು ಇನ್ನಷ್ಟು ಸಮಗ್ರ ಮತ್ತು ಪರಿಣಾಮಕಾರಿಯಾಗಿಸಲು ಅವೆರಡು ಕಾಯ್ದೆಗಳಿಗೆ ತಿದ್ದುಪಡಿ ತರುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ. ಈ ಕಾಯ್ದೆಗಳನ್ನು ಹೆಚ್ಚು ತೀಕ್ಷ್ಣವಾಗಿಸಲು ಎಲ್ಲ ರಾಜ್ಯಗಳಿಂದ ಸಲಹೆಗಳನ್ನು ನಾವು ಆಹ್ವಾನಿಸಿದ್ದೇವೆ.
ಬಹುತೇಕ ರಾಜ್ಯಗಳು ಪ್ರತಿಕ್ರಿಯಿಸಿದ್ದು, ತಿದ್ದುಪಡಿಗಳಿಗೆ ಅಂತಿಮ ರೂಪ ನೀಡುವ ಪ್ರಕ್ರಿಯೆಯಲ್ಲಿ ನಾವಿದ್ದೇವೆ ಎಂದು ಸಾಮಾಜಿಕ ನ್ಯಾಯ ಖಾತೆಯ ಕೇಂದ್ರ ಸಚಿವೆ ಮೀರಾ ಕುಮಾರ್ ವರದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ರಾಷ್ಟ್ರಾದ್ಯಂತ ಈ ಕಾಯ್ದೆಗಳನ್ನು ಜಾರಿಗೆ ತರಲು ಕೆಲವು ಲೋಪಗಳಿವೆ ಎಂದು ಹೇಳಿದ ಅವರು, ಪರಿಶಿಷ್ಟ ಜಾತಿಗಳನ್ನು ಕುರಿತ ರಾಷ್ಟ್ರೀಯ ಆಯೋಗದ ಜತೆ ಸಮಾಲೋಚನೆ ನಡೆಸಿ ತಿದ್ದುಪಡಿಗಳನ್ನು ತರುವ ಬಗ್ಗೆ ತಮ್ಮ ಸಚಿವಾಲಯ ಕಾರ್ಯೋನ್ಮುಖವಾಗಿದೆ ಎಂದು ಅವರು ನುಡಿದರು. ಪ್ರಸಕ್ತ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುಂಚೆ ಈ ಪ್ರಕ್ರಿಯೆಯನ್ನು ಮುಗಿಸಲು ಸಾಧ್ಯವಾಗುವುದಿಲ್ಲ ಎಂದೂ ಅವರು ತಿಳಿಸಿದರು.
ಇದು ಇನ್ನಷ್ಟು ಕಾಲಾವಕಾಶ ಹಿಡಿಯುತ್ತದೆ. ಭಾರತವನ್ನು ದೌರ್ಜನ್ಯರಹಿತ ಮತ್ತು ಅಸ್ಪೃಶ್ಯರಹಿತವನ್ನಾಗಿ ಮಾಡುವ ಸವಾಲಿನ ಕಾರ್ಯಕ್ಕೆ ಕೇಂದ್ರ ಸರ್ಕಾರ ಹೊರಟಿದೆ ಎಂದು ಸಚಿವೆ ಹೇಳಿದರು.
|